ಕೊಪ್ಪಳ : ಒತ್ತಡ ನಿರ್ವಹಣೆಗೆ ಕ್ರೀಡೆ ತುಂಬಾ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜನವರಿ 19 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಾರೆ. ದೈಹಿಕ ಸಾಮರ್ಥ್ಯ ಚೆನ್ನಾಗಿದ್ದರೆ ಮಾತ್ರ ಕೆಲಸಗಳೂ ಸಹ ಉತ್ತಮವಾಗಿ ನಡೆಯಲು ಸಾಧ್ಯವಾಗಿದ್ದು, ಎಲ್ಲಾ ನೌಕರರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ನೌಕರರು ಕೆಲಸದ ನಡುವೆಯೂ ತಮ್ಮಲ್ಲಿ ಅಡಗಿರುವ ಕಲೆ, ಕೌಶಲ್ಯಗಳನ್ನು ಪ್ರಸ್ತುತ ಪಡಿಸಲು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಅನುಕೂಲವಾಗಲಿವೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಬಹುದು. ವಯಸ್ಸಿನ ಮಿತಿ ಇಲ್ಲದೆ ಕ್ರೀಡೆ ಹಾಗೂ ನಾನಾ ಕಲೆಗಳನ್ನು ಪ್ರಸ್ತುತ ಪಡಿಸುವುದು ನಿಜಕ್ಕೂ ಶ್ಲ್ಯಾಘನೀಯವಾಗಿದೆ ಎಂದರು.

ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಮಾತನಾಡಿ, ಸರ್ಕಾರಿ ನೌಕರರಿಗೆ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು, ಸರ್ಕಾರದ ಸೇವೆ, ಸೌಲಭ್ಯ, ಕಾರ್ಯಕ್ರಮಗಳು, ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಜನಸಾಮನ್ಯರಿಗೆ ಉತ್ತಮವಾಗಿ ಸೇವೆ ನೀಡಬೇಕು. ನೌಕರರಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರಹಾಕಲು ಇದು ಒಳ್ಳೆಯ ವೇದಿಕೆಯಾಗಿದೆ. ಸರಕಾರಿ ನೌಕರರ ಪಾಲ್ಗೊಳ್ಳುವಿಕೆ ಮತ್ತು ಅವರಿಗೆ ಪ್ರೋತ್ಸಾಹ ನೀಡುವುದು ಅತ್ಯವಶ್ಯಕವಾಗಿದೆ. ಸ್ಪರ್ಧೆ ಎಂದು ಭಾವಿಸದೆ, ಸ್ನೇಹ ಸಮ್ಮೇಳನ ಎಂದು ಭಾವಿಸಿ, ಎಲ್ಲರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್.ಜುಮ್ಮನ್ನವರ ಮಾತನಾಡಿ, ಸರಕಾರಿ ನೌಕರರು ದಿನನಿತ್ಯ ಕೆಲಸದ ಒತ್ತಡದಿಂದ ಹೊರಬರಲು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಸಹಕಾರಿ. ಸರ್ಕಾರದ ಯೋಜನೆಗಳು ಕಾರ್ಯಕ್ರಮಗಳು ಕಾರ್ಯ ರೂಪಕ್ಕೆ ಬರಲು ನೌಕರ ಶ್ರಮ ಅಗತ್ಯವಾಗಿದೆ. ಸರ್ಕಾರದ ಮಹತ್ವದ ಯೋಜನೆಯಾದ ಪುಣ್ಯಕೋಟಿ ಯೋಜನೆಯಲ್ಲೂ ನೌಕರರು ಕೈಜೋಡಿಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜೀಯಾ ತರನ್ನುಮ್, ಕ.ರಾ.ಸ.ನೌಕರರ ಸಂಘದ ಜಿಲ್ಲಾ ಗೌರಾವಾಧ್ಯಕರಾದ್ಷ ಸುಧಾಕರ ಡಿ.ಜೆ., ಪ್ರಧಾನ ಕಾರ್ಯದರ್ಶಿಗಳಾದ ಶಂಕರಗೌಡ ಮಾಲಿಪಾಟೀಲ, ಖಜಾಂಚಿ ಸುಶಿಲೇಂದ್ರ ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ ಸೇರಿದಂತೆ ತಾಲೂಕು ಸಂಘಗಳ ಪದಾಧಿಕಾರಿಗಳು, ನೌಕರರು ಇದ್ದರು.

*ಕ್ರೀಡಾಕೂಟಕ್ಕೆ ಚಾಲನೆ:* ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಗುಂಡು ಎಸೆಯುವುದರ ಮೂಲಕ ಜಿ.ಪಂ ಸಿಇಒ ಬಿ.ಫೌಜೀಯಾ ತರನ್ನುಮ್ ಅವರು ಚಾಲನೆ ನೀಡಿದರು. ಇದೆ ವೇಳೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಕ.ರಾ.ಸ.ನೌ.ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಗುಂಡು ಎಸೆದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸರಕಾರಿ ನೌಕರರು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.

error: Content is protected !!