ಕೊಪ್ಪಳ :ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯೊಬ್ಬ ಲಂಚದ ಹಣವನ್ನೇ ಅಕ್ಷರಶಃ ನುಂಗಿದ ಮತ್ತು ಹಾಗೆ ನುಂಗಿದ ನೋಟುಗಳನ್ನು ಅಧಿಕಾರಿಗಳು ಕಕ್ಕಿಸಿದ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅಧಿಕಾರಿಯೊಬ್ಬರ ವಿರುದ್ಧ ಲಂಚ ಬೇಡಿಕೆ ಇಟ್ಟ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆದರೆ, ಹಣದೊಂದಿಗೆ ತಾನು ಸಿಕ್ಕಿಬೀಳುತ್ತಿದ್ದಂತೆ ಚಾಲಾಕಿ ಅಧಿಕಾರಿ ಕೈಯಲ್ಲಿದ್ದ ಲಂಚದ ಹಣದ ನೋಟುಗಳನ್ನೇ ಗಬಕ್ಕನೇ ಬಾಯಿಗೆ ಹಾಕಿಕೊಂಡು ನುಂಗಿದ್ದಾನೆ!
ಅರೇ.. ! ಹೊಂಚು ಹಾಕಿ ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಲಂಚದ ಹಣದ ಸಹಿತ ಭ್ರಷ್ಟ ಅಧಿಕಾರಿಯನ್ನು ಹಿಡಿದರೂ, ಆತ ಪ್ರಮುಖ ಸಾಕ್ಷಿಯಾದ ನೋಟುಗಳನ್ನೇ ನುಂಗಿ ನಾಶ ಮಾಡಿಬಿಟ್ನಾ… ಎಂದು ಅವಕ್ಕಾದ ಅಧಿಕಾರಿಗಳು, ಕೂಡಲೇ ಉಪಾಯ ಮಾಡಿ, ಅಧಿಕಾರಿಯನ್ನು ಹಿಡಿದು ನೀರು ಕುಡಿಸಿ ನೋಟುಗಳನ್ನು ಕಕ್ಕಿಸಿದ್ದಾರೆ!
ಹೀಗೆ ಲೋಕಾಯುಕ್ತ ಅಧಿಕಾರಿಗಳಿಗೇ ಚಳ್ಳೇಹಣ್ಣು ತಿನ್ನಿಸಲು ಹೋಗಿ ತಾನೇ ಮಣ್ಣು ಮುಕ್ಕಿದ್ದಾನೆ, ನುಂಗಿದ ಲಂಚವನ್ನು ಕಕ್ಕಿದ ಅಧಿಕಾರಿ ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ದಸ್ತಗೀರ್ ಅಲಿ.
ಆ ಅಧಿಕಾರಿ ಎನ್‌ಜಿಒ ಒಂದಕ್ಕೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಎಂಬುವರಿಂದ ಎರಡು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚಕೋರ ಅಧಿಕಾರಿಯ ಬೇಡಿಕೆಗೆ ಸೊಪ್ಪು ಹಾಕದ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಹಕಾರ ಸಂಘಗಳ ಇಲಾಖೆಯ ಕಚೇರಿಯಲ್ಲಿ ದಸ್ತಗಿರ್ ಅಲಿ ಲಂಚ ಪಡೆಯುತ್ತಿರುವಾಗಲೇ ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಆದರೆ, ಲೋಕಾಯುಕ್ತ ಬಲೆಗೆ ಬಿದ್ದೆ ಎಂಬುದು ಗೊತ್ತಾಗುತ್ತಿದ್ದಂತೆ ಅಧಿಕಾರಿ ದಸ್ತಗೀರ್ ಅಲಿ, ಕೂಡಲೇ ಕೈಯಲ್ಲಿದ್ದ ಎರಡು ಸಾವಿರ ರೂಪಾಯಿ ಮೊತ್ತದ ಐದು ನೂರು ರೂಪಾಯಿಯ ನಾಲ್ಕು ನೋಟನ್ನು ಗಬಕ್ಕೆನೇ ನುಂಗಿ ಸಾಕ್ಷ್ಯ ನಾಶದ ಪ್ರಯತ್ನ ಮಾಡಿದ್ದಾರೆ.
ಆದರೆ, ನೋಟು ಗಂಟಲಲ್ಲೇ ಸಿಕ್ಕಿಕೊಂಡಿದ್ದವು. ಆರೋಪಿಯ ಈ ಅನಿರೀಕ್ಷಿತ ಟ್ರಿಕ್ ನಿಂದ ಗಾಬರಿಯಾದ ಅಧಿಕಾರಿಗಳು ಮತ್ತೊಂದು ಪ್ರತಿತಂತ್ರ ಹೆಣೆದು, ಆತನಿಗೆ ನೀರು ಕುಡಿಸಿ, ವಾಂತಿ ಮಾಡಿಸಿ ನುಂಗಿದ ಲಂಚದ ಹಣವನ್ನು ಅಕ್ಷರಶಃ ಕಕ್ಕಿಸಿದ್ದಾರೆ!
ಹಣ ಕಕ್ಕಿಸಿದ ಬಳಿಕ ಸಾಕ್ಷಿ ಸಹಿತ ದಸ್ತಗಿರ್ ಅಲಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಕೊಪ್ಪಳ ಲೋಕಾಯುಕ್ತ ಇನ್ಸ್‌ಪೆಕ್ಟರ್ ನಾಗರತ್ನ, ಸುನೀಲ್ ಮೇಗಿಲಮನಿ ಕೂಡ ಭಾಗಿಯಾಗಿದ್ದರು.