
ಕೊಪ್ಪಳ :ಜನವರಿ 17 ಆಟೋ ಬ್ರ್ಯಾಂಡಿಂಗ್ ಮೂಲಕ ಆರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು (ಜ.16) ತಾಲೂಕಾ ಕ್ರಿಡಾಂಗಣದಲ್ಲಿ ಆಟೋ ಬ್ರ್ಯಾಂಡಿಂಗ್ ಮೂಲಕ ಆರೋಗ್ಯ ಇಲಾಖೆಯ ಯೋಜನೆಗಳು ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಹಾಗೂ ಸಮಾಜನದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಇಲಾಖೆಯ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಹಾಗೂ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಸಲುವಾಗಿ ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಅದರಂತೆ ಆಟೋಗಳ ಮೂಲಕ ಜಾಗೃತಿ ಮೂಡಿಸಲು ಸರ್ಕಾರ ಆಟೋ ಬ್ರ್ಯಾಂಡಿಂಗ್ ಕಾರ್ಯಕ್ರಮವನ್ನು ಜಾರಿಗೆಗೊಳಿಸಿದೆ.

ನಮ್ಮ ಕ್ಲಿನಿಕ್, ನವಜಾತ ಶಿಶು ಆರೈಕೆ, ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ತಾಯಿಯ ಎದೆಹಾಲು ಅಮೃತ, ಕಾಂಗೋರ್ ಮಾದರಿ ಆರೈಕೆ, ಮಧುಮೇಹ ಹಾಗೂ ಕ್ಯಾನ್ಸರ್ ಖಾಯಿಲೆ ನಿಯಂತ್ರಣ ಕುರಿತು ಆಟೋಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲೂಕಾಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು, ತಮ್ಮ ಗ್ರಾಮದಲ್ಲಿ ಅಕ್ಕ-ಪಕ್ಕದ ಸಾರ್ವಜನಿಕರಿಗೂ ಮಾಹಿತಿ ನೀಡಬೇಕು. ಪ್ರತಿಯೊಬ್ಬ ನಾಗರಿಕರು ಆರೋಗ್ಯ ಇಲಾಖೆಯ ಮಾಹಿತಿಯನ್ನು ತಿಳಿದುಕೊಂಡು ಜಾಗೃತಿಯಾಗಿ ಆರೋಗ್ಯವಂತ ಸಮಾಜನ್ನು ನಿರ್ಮಾಣ ಮಾಡಲು ಸಹಕರಿಸುವಂತೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಗಣಪತಿ ಕೆ.ಲಮಾಣಿ ಅವರು ಮಾತನಾಡಿ, ಆರೋಗ್ಯ ಇಲಾಖೆಯ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಉಪಯುಕ್ತವಾಗಿವೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಭಾವಿ ಪ್ರಜೆಗಳಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಇತರರಿಗೂ ತಿಳಿಸುವ ಮೂಲಕ ಮಾದರಿಯಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ., ಕಾಲೇಜಿನ ಸಹ-ಉಪನ್ಯಾಸಕರಾದ ಡಾ ಪ್ರದೀಪಕುಮಾರ, ಡಾ ನರಸಿಂಹ, ಮಹಾಂತೆಶ, ನಾಗರತ್ನ ಸೇರಿದಂತೆ ಆಟೋ ಚಾಲಕಾರ ಯಮನೂರಪ್ಪ, ಪ್ರಕಾಶ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.