
ಗಂಗಾವತಿ: ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ, ವರ್ಗಾವಣೆ ಮಾಡುವ ಆದೇಶವು ಅವೈಜ್ಞಾನಿಕವಾಗಿರುತ್ತದೆ.
250 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಕರನ್ನು, ಸಂಗೀತ ಶಿಕ್ಷಕರನ್ನು, ಹಿಂದಿ ಶಿಕ್ಷಕರನ್ನು ಹಾಗೂ ಇತರೆ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ, ವರ್ಗಾವಣೆ ಮಾಡಲಾಗುತ್ತಿದೆ.
ಅದೇರೀತಿಯಲ್ಲಿ ಕೆಲವೊಂದು ಶಾಲೆಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ಮೀಸಲಿರಿಸಿ ಈಗ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಹೆಚ್ಚುವರಿ ಮಾಡಲಾಗುತ್ತಿದೆ. ಇದು ಕೂಡಾ ಅವೈಜ್ಞಾನಿಕವಾಗಿದೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ಖಂಡಿಸಿದರು.
ಅವರು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಬಿಡಲು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಮಾತನಾಡುತ್ತಿದ್ದರು.
ಬಡ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ಹಿಂದಿ ಮತ್ತು ಇಂಗ್ಲೀಷ್ ಹಾಗೂ ದೈಹಿಕ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.

ಶಿಕ್ಷಕರನ್ನು ಹೆಚ್ಚುವರಿ ಮಾಡುವುದರಿಂದ ಶಿಕ್ಷಕರಿಗಿಂತ ಮಕ್ಕಳಿಗೆ ಅನಾನುಕೂಲವಾಗುತ್ತಿದೆ. ಇತರೆ ಇಲಾಖೆಗಳ ಚಿಕ್ಕ ಕಛೇರಿಗಳಲ್ಲಿಯೂ ‘ಡಿ’ ಗ್ರೂಪ್ ಹುದ್ದೆ ಇದ್ದು, ಆದರೆ ನೂರಾರು ಮಕ್ಕಳು ಓದುವ ಶಾಲೆಗಳಲ್ಲಿ ‘ಡಿ’ ಗ್ರೂಪ್ ಹುದ್ದೆಯ ಸಿಬ್ಬಂದಿಗಳು ಇರುವುದಿಲ್ಲ.
ಮಕ್ಕಳೇ ದೇವರೆಂದು ಹೇಳಿಕೊಳ್ಳುವ ನಾವುಗಳು ಮಕ್ಕಳಿಂದಲೇ ಪ್ರತಿದಿನ ಸ್ವಚ್ಛತಾ ಕಾರ್ಯ ಮಾಡುವ ಪರಿಸ್ಥಿತಿ ಇರುತ್ತದೆ. ಶಾಲೆಗಳಲ್ಲಿ ‘ಡಿ’ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡದೇ ಹಾಗೂ ಕುಡಿಯುವ ನೀರು ಸೌಲಭ್ಯ ಹಾಗೂ ಶೌಚಾಲಯಗಳು ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಇರುವುದಿಲ್ಲ.
ಸೋರುತ್ತಿರುವ ಕೊಠಡಿಗಳು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸದೇ, ಇರುವ ಶಿಕ್ಷಕರನ್ನು ಹೆಚ್ಚುವರಿ ಮಾಡಿ ಮಕ್ಕಳ ಕಲಿಕೆಗೆ ಪೂರಕವಲ್ಲದ ವಾತಾವರಣ ಸೃಷ್ಟಿಸುತ್ತಿರುವುದು ಖಂಡನೀಯವಾಗಿದೆ. ಕೇವಲ ಮಾತಿನಿಂದ ಕನ್ನಡ ಶಾಲೆಗಳು, ಸರ್ಕಾರಿ ಶಾಲೆಗಳ ಬಗ್ಗೆ ಹೇಳಿದರೆ ಸಾಲದು.
ಗ್ರಾಮೀಣ ಪ್ರದೇಶಗಳಿಗೆ ಶಾಲಾ ಅವಧಿಗೆ ಬಸ್ ಸೌಕರ್ಯವಿಲ್ಲದೇ ಸುಮಾರು ೬ ಕಿ.ಮೀ ದೂರದಲ್ಲಿ ನಡೆದು ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿಯನ್ನು ಗಮನಿಸದೇ ಇರುವುದು ನಮ್ಮ ಸರ್ಕಾರದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ. ಸರ್ಕಾರವು ಪರೋಕ್ಷವಾಗಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ಮಾಡಿದಂತಾಗುತ್ತದೆ.
ಈಗಲಾದರೂ ಮೇಲಿನ ಎಲ್ಲಾ ಸಮಸ್ಯೆಗಳನ್ನು ಅರಿತುಕೊಂಡು ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದರ ಮೂಲಕ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಯಾವೊಬ್ಬ ಶಿಕ್ಷಕರನ್ನು ಹೆಚ್ಚುವರಿ ಮಾಡಬಾರದು.
ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೇ ನಮ್ಮ ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಕಾರಟಗಿ ಹಾಗೂ ಕುಕನೂರು ತಾಲ್ಲೂಕುಗಳಲ್ಲಿ ಬಿ.ಇ.ಓ ಕಛೇರಿಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಈ ಸಂದರ್ಭದಲ್ಲಿ ಸಂತೋಷ್ ಗೌಡ್ರ ಯಮನೂರ ನಾಯಕ, ಮಹಮದ್, ಮಲ್ಲೇಶ ಅಶೋಕ, ಸುರೇಶ,ಹನುಮೇಶ, ಶಿವಶರಣ ಗೋಡಿ, ಮಾರುತಿ, ಮಲ್ಲಿಕಾರ್ಜುನ ಕುಷ್ಟಗಿ, ಮತ್ತಿತರರು ಹಾಜರಿದ್ದರು.