
ಕೊಪ್ಪಳ: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಗುರುವಾರಂದು ಮಕ್ಕಳಿಗೆ ಕನ್ನಡ ಗೀತೆಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ಜನವರಿ 12 ರಂದು ಜಿಲ್ಲಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಸಭಾಂಗಣದಲ್ಲಿ ಬೆಳಿಗ್ಗೆ 10 ಘಂಟೆ ಯಿಂದ ಪ್ರಾರಂಭವಾಗಿ ಸಾಯಂಕಾಲ 5:00ಘಂಟೆ ವರೆಗೆ ವಿವಿಧ ಸರ್ಕಾರಿ ಶಾಲೆಗಳ ಹಾಗೂ ಸರಕಾರಿ ಬಾಲಕರ ಹಾಗೂ ಬಾಲಕೀಯರ ಬಾಲ ಮಂದಿರದ ಮಕ್ಕಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆಯನ್ನು ನಡೆಸಿದ್ದು, ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪದ್ಮಾವತಿ ಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕನ್ನಡ ಪ್ರೀತಿಸುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸಲು ಬಾಲ ಭವನ ಸೊಸೈಟ ಬೆಂಗಳೂರುರವರು ಕನ್ನಡ ಗೀತೆ ಹಾಡುವ ಸ್ಪರ್ಧೆಯ ಕಾರ್ಯಕ್ರಮವನ್ನು ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಮಕ್ಕಳು ಭಾಗವಹಿಸಬೇಕು.

ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಪ್ರಥಮ ಬಹುಮಾನ ಗೆದ್ದಂತೆ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಮಕ್ಕಳು ಪಡಿಸಿಕೊಳ್ಳಬೆಕೆಂದು ತಿಳಿಸಿದರು. ಅಲ್ಲದೇ ಕನ್ನಡ ಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇ.ಸಿ.ಒ ಪ್ರಭುರಾಜ ಬಳಿಗೇರಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಜಿಲ್ಲಾ ಬಾಲ ಭವನ ಕಾರ್ಯಕ್ರಮದ ಸಂಯೋಜಕ ಮೆಹಬೂಬಸಾಬ ಇಲಾಹಿ ಕಾರ್ಯಕ್ರಮದ ನಿರೂಪಿಸಿದರು. ಸರಕಾರಿ ಬಾಲಕೀಯರ ಬಾಲಮಂದಿರದ ಅಧೀಕ್ಷಕರಾದ ಭುವನೇಶ್ವರಿ ಶೀಲವಂತರ ಸ್ವಾಗತಿಸಿದರು. ಪೋಷಣ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಸಹಾಯಕ ಕುಮಾರ ಪ್ರಮೋದಕುಮಾರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರು, ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.