
ಜನವರಿ 25ರಂದು ರಾಷ್ಟ್ರೀಯ ಮತದಾರ ದಿನಾಚರಣೆ
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ಯ ಪೂರ್ವಸಿದ್ಧತಾ ಸಭೆ*
ಕೊಪ್ಪಳ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ಜಿಲ್ಲಾ ಚುನಾವಣಾಧಿಕಾರಿಗಳು
ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಜನವರಿ 13ರಂದು ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಕೇಶ್ವಾನ್ ವಿಡಿಯೋ ಸಭಾಂಗಣದಲ್ಲಿ ಜನವರಿ 13 ರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲು ಮತ್ತು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಆಯಾ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತಗಟ್ಟೆಗಳಲ್ಲಿ ವಿಕಲಚೇತನರಿಗಾಗಿ ರ‍್ಯಾಂಪ್ ಸೌಲಭ್ಯ, ಶೌಚಾಲಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿರುವ ಯುವ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಆಯಾ ತಹಶೀಲ್ದಾರರು ತ್ವರಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಧ್ಯೇಯವಾಕ್ಯದೊಂದಿಗೆ ಜನವರಿ 25 ರಂದು ತಮ್ಮ ತಮ್ಮ ತಾಲ್ಲೂಕು ಅಥವಾ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಪ್ರಸ್ತುತ, ಜಿಲ್ಲೆಯಲ್ಲಿರುವ ಒಟ್ಟು ಮತಗಟ್ಟೆಗಳ ಹಾಗೂ ಮತದಾರರ ವಿವರವನ್ನು ತಿಳಿಸಿದರು.
60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 278 ಮತಗಟ್ಟೆಗಳಿದ್ದು 1,15,924 ಪುರುಷ ಮತದಾರರು ಹಾಗೂ 1,14,334 ಮಹಿಳೆಯರು ಮತ್ತು 8 ಇತರೆ ಸೇರಿ ಒಟ್ಟು 2,30,266 ಮತದಾರರಿದ್ದಾರೆ.
61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 264 ಮತಗಟ್ಟೆಗಳಿದ್ದು, 1,08,499 ಪುರುಷರು ಹಾಗೂ 1,11,346 ಮಹಿಳೆಯರು ಮತ್ತು 8 ಇತರೆ ಸೇರಿ ಒಟ್ಟು 2,19,853 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 235 ಮತಗಟ್ಟೆಗಳಿದ್ದು, 97,886 ಪುರುಷರು ಹಾಗೂ 99,323 ಮಹಿಳೆಯರು ಮತ್ತು 10 ಇತರೆ ಸೇರಿ ಒಟ್ಟು 1,97,219 ಮತದಾರರಿದ್ದಾರೆ.
63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 256 ಮತಗಟ್ಟೆಗಳಿದ್ದು, 1,10,555 ಪುರುಷರು ಹಾಗೂ 1,09,643 ಮಹಿಳಾ ಮತ್ತು 11 ಇತರೆ ಸೇರಿ ಒಟ್ಟು 2,20,209 ಮತದಾರರಿದ್ದಾರೆ.
64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 289 ಮತಗಟ್ಟೆಗಳಿದ್ದು, 1,24,444 ಪುರುಷರು ಹಾಗೂ 1,26,248 ಮಹಿಳೆಯರು ಮತ್ತು 12 ಇತರೆ ಸೇರಿ ಒಟ್ಟು 2,50,704 ಮತದಾರರಿದ್ದಾರೆ. ಈ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,322 ಮತಗಟ್ಟೆಗಳಿದ್ದು, 5,57,308 ಪುರುಷ ಮತದಾರರು ಹಾಗೂ 5,60,894 ಮಹಿಳಾ ಮತದಾರರು ಮತ್ತು 49 ಇತರೆ ಮತದಾರರು ಸೇರಿ ಒಟ್ಟು 11,18,251 ಮತದಾರರಿದ್ದಾರೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷು ಗಿರಿ, ಉಪವಿಭಾಗಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಸಮೀರ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕರಾದ ಕಾವ್ಯ ರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.