ಬಳ್ಳಾರಿ,ಅ.10:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧರ್ಮದ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟçದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಅನುಯಾಯಿಗಳು ತೆರಳುವ ಬಸ್‌ಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರದಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಚಾಲನೆ ನೀಡಿ, ಶುಭ ಹಾರೈಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಗೆ ಅಕ್ಟೋಬರ್ 10 ರಿಂದ 14 ರ ವರೆಗೆ ಮಹಾರಾಷ್ಟçದ ನಾಗಪುರದ ದೀಕ್ಷಾ ಭೂಮಿ ಯಾತ್ರೆಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರ ಅನುಯಾಯಿಗಳು ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಿನಲ್ಲಿ ನಾಗಪುರದಲ್ಲಿ ನಡೆಯುವ ಪ್ರವರ್ತನಾ ದಿನ ಕಾರ್ಯಕ್ರಮಕ್ಕೆ ದೀಕ್ಷಾಯಾತ್ರೆ ಕೈಗೊಳ್ಳುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಾಬಾ ಸಾಹೇಬರ ಅನುಯಾಯಿಗಳನ್ನು ಪ್ರತಿ ವರ್ಷವೂ ದೀಕ್ಷಾಯಾತ್ರೆಗೆ ಕಳುಹಿಸಲಾಗುತ್ತಿದ್ದು, ಈ ವರ್ಷ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 180 ಅನುಯಾಯಿಗಳನ್ನು ನಾಗಪುರ ದೀಕ್ಷಾಯಾತ್ರೆಗೆ ಕಳುಹಿಸುತ್ತಿರುವುದಾಗಿ ಅವರು ತಿಳಿಸಿದರು.

ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಿವಪ್ಪ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಮಾಜದ ಮುಖಂಡರು ಹಾಗೂ ಇನ್ನೀತರರು ಇದ್ದರು.

error: Content is protected !!