ಅಕ್ಟೋಬರ್ 06 ರಂದು ಹರಿಹರದಲ್ಲಿ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭ
ಗಂಗಾವತಿ: ಅಕ್ಟೋಬರ್ 06 ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸೋಮನಗೌಡ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಪಂಚಮಸಾಲಿ ಸಮಾಜದ ಸಂಘಟನೆ ಪ್ರಾರಂಭವಾಗಿ ಇಂದಿಗೆ 30 ವರ್ಷಗಳಾಗಿವೆ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಅವಿರೋಧವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದೇ ಅಕ್ಟೋಬರ್ 6 ರಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಪದಗ್ರಹಣ ಸಮಾರಂಭದಲ್ಲಿ ಸಮಾಜದ ಹಿರಿಯ ಮುಖಂಡರು, ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರಕ್ಕೂ ಅಧಿಕ ಸಮಾಜದ ಭಾಂಧವರು ಭಾಗವಹಿಸಲಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಸಮಾಜದ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಲು ಕೋರಿದರು.
ಜೊತೆಗೆ ಅಂದಿನ ಕಾರ್ಯಕ್ರಮದಲ್ಲಿ ಸಮಾಜದ ಸಂಘಟನೆ ಹಾಗೂ ಮೀಸಲಾತಿ ಸೇರಿದಂತೆ ಅಭಿವೃದ್ಧಿಯ ಕುರಿತು ಮಾತನಾಡಲಿದ್ದೇನೆ ಎಂದು ತಿಳಿಸಿದರು.
ನಂತರ ಸಮಾಜದ ಮುಖಂಡರಾದ ಕಳಕನಗೌಡ ಪಾಟೀಲ ಮಾತನಾಡಿ, ನಮ್ಮ ಪಂಚಮಸಾಲಿ ಸಮಾಜದ ಭೀಷ್ಮ ಎಂದೇ ಪ್ರಖ್ಯಾತರಾದ ಸೋಮನಗೌಡ ಪಾಟೀಲ ಅವರು ತಮ್ಮ ಸರ್ಕಾರಿ ನೌಕರಿಗೆ ನಿವೃತ್ತಿ ಹೇಳಿ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಿರುವುದು ಸಂತೋಷದ ವಿಷಯ. ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಜಿಲ್ಲೆಯ ಪಂಚಮಸಾಲಿ ಸಮಾಜದ ಎಲ್ಲಾ ಬಾಂಧವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಪ್ಪ ಯಲಬುರ್ಗಿ, ಸಮಾಜದ ಮುಖಂಡರಾದ ಶರಣಪ್ಪ ಕಂದಕೂರ್, ಮಂಜುನಾಥ ತಾಳೂರು, ಮಂಜುನಾಥ ಗುಡ್ಲಾನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.