ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ)ಸಮಿತಿ ಸಭೆ
ಬಳ್ಳಾರಿ,ಸೆ.04:ಬಡಜನರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಯೋಜನೆಗಳ ಸ್ಪಷ್ಟತೆಯನ್ನು ನಿಖರವಾಗಿ ತಿಳಿದುಕೊಂಡು, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಸಂಸದ ಈ.ತುಕಾರಾಂ ಅವರು ಹೇಳಿದರು.
ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲಾಖಾವಾರು ಜನಪರ ಯೋಜನೆಗಳನ್ನು ತಲುಪಿಸುವಲ್ಲಿ ಸ್ಥಳೀಯ ಶಾಸಕರ ಮತ್ತು ಸಂಸದರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿ, ಸರ್ಕಾರದ ಕಾರ್ಯಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕು ಎಂದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಒಟ್ಟು ಶೇ.80 ರಷ್ಟು ಬಿತ್ತನೆ ಪ್ರಗತಿಯಾಗಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮರ್ಪಕ ದಾಸ್ತಾನಿದ್ದು, ಅಭಾವವಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯವಾಗಬೇಕು. ಕಳಪೆ ಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟದ ಪ್ರಕರಣಗಳು ವರದಿಯಾಗಬಾರದು. ರೈತರಿಗಿರುವ ಯೋಜನೆಗಳನ್ನು ವಿಳಂಬ ಮಾಡದೇ ಅವರಿಗೆ ದೊರಕಿಸಬೇಕು ಎಂದು ಸಂಸದರು ಹೇಳಿದರು.
ಜಿಲ್ಲೆಯಲ್ಲಿ ರೈತರಿಗೆ ಮಿಶ್ರಬೆಳೆ ಪದ್ಧತಿಯ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿಗೊಂದು ಮಣ್ಣು ಪರೀಕ್ಷೆಯ ಸಂಶೋಧನಾ ಕೇಂದ್ರ ಆರಂಭಿಸಲು, ಕಾರ್ಯಯೋಜನೆ ರೂಪಿಸಿ ವರದಿ ನೀಡಿ ಎಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರಮುಖ ಬೆಳೆಯಾದ ಮೆಣಸಿನಕಾಯಿ ಬೆಳೆಗೆ ಉತ್ತಮ ದರ, ಮಾರುಕಟ್ಟೆ, ಶೀತಲ ಶೇಖರಣೆ ಘಟಕ ಒದಗಿಸಲು ಬಳ್ಳಾರಿ ಭಾಗದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದಾಗ, ಜಿಲಾಧಿಕಾರಿಗಳು ಪ್ರತಿಕ್ರಿಯಿಸಿ ಈಗಾಗಲೇ ಆಲದಹಳ್ಳಿ ಭಾಗದಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ಸಂಸದರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಮರುಕಳಿಸದಂತೆ, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಲು, ಸಿಎಸ್‌ಆರ್ ಅನುದಾನದಡಿ ನಿವೃತ್ತ ನಿಪುಣ ಶಿಕ್ಷಕರನ್ನು ನಿಯೋಜಿಸಿ ವಿಶೇಷ ಉಪನ್ಯಾಸ ಆಯೋಜಿಸಲು ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಸಂಸದರು ಸಲಹೆ ನೀಡಿದರು.
ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಗತ್ಯ ಮೂಲಭೂತ ಸೌಲಭ್ಯ ಬೇಕಾದಲ್ಲಿ ಗಮನಕ್ಕೆ ತರಬೇಕು ಎಂದರಲ್ಲದೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂಬ ಘಟನೆಗಳು ಕಂಡುಬರುತ್ತಿವೆ; ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಸಿಸಿಟಿವಿ, ಬಯೋಮೆಟ್ರಿಕ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ತಡೆಗಟ್ಟುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛತೆ, ಧೂಮೀಕರಣ, ಬ್ಲೀಚಿಂಗ್ ಪೌಡರ್ ಸಿಂಪರಣೆ ಸೇರಿದಂತೆ ಜನ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಜೆಜೆಎಂ ಕಾಮಗಾರಿಗಳು ಸ್ಥಗಿತಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಬೇಕು, ಈ ಕುರಿತು ತಾಲ್ಲೂಕುವಾರು ಕೈಗೊಂಡ ಪ್ರಗತಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಎನ್‌ಎಂಡಿಸಿಯಲ್ಲಿ ಇತ್ತೀಚೆನ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿರುವುದಿಲ್ಲ, ಸರೋಜಿನಿ ಮಹಿಷಿ ವರದಿಯನ್ವಯ ಜಿಲ್ಲೆಯ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಎನ್‌ಎಂಡಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ, ನಗರ), ಸ್ವಚ್ಛಭಾರತ್ ಮಿಷನ್, ಮಹಾತ್ಮ ಗಾಂಧಿ ನರೇಗಾ ಯೋಜನೆ, ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಯೋಜನೆಗಳ ಕುರಿತ ಸುದೀರ್ಘ ಚರ್ಚೆ ನಡೆಸಿದರು.
ಸಭೆಗೂ ಮುನ್ನ ಸಂಸದರು, ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬಳಿಕ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛ ಕರ್ತವ್ಯಗಳ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಸೇರಿದಂತೆ ಗ್ರಾಪಂ, ಪುರಸಭೆ, ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
———