ಗಂಗಾವತಿ : ತಾಲೂಕಿನ ಆನೆಗೊಂದಿಯಲ್ಲಿ ಮಾರ್ಚ್-೧೧ ಮತ್ತು ೧೨ ರಂದು ನಡೆದ ಅದ್ಧೂರಿ ಆನೆಗೊಂದಿ ಉತ್ಸವದಲ್ಲಿ ಭಾಗವಹಿಸಿದ ೩೦ ಸಾವಿರಕ್ಕೂ ಅಧಿಕ ಜನರಿಗಾಗಿ ತಯಾರಿಸಿದ ಅಡುಗೆಯಲ್ಲಿ ಉಳಿದ ಅನ್ನವನ್ನು ಉತ್ಸವದ ಆಹಾರ ನಿರ್ವಹಣಾ ಸಮಿತಿ ಅಧಿಕಾರಿಗಳು ಸ್ಥಳದಲ್ಲಿಯೇ ಚೆಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ್ದು, ಈ ವಿಸರ್ಜಿತ ಆಹಾರ ಸೇವಿಸಿ ೨೪ ಕುರಿಗಳು ಮೃತಪಟ್ಟಿವೆ. ಇನ್ನೂ ೨೭೬ ಕುರಿಗಳು ಅಸ್ವಸ್ಥಗೊಂಡಿವೆ ಎಂದು ಕರವೇ (ಹೆಚ್.ಶಿವರಾಮೇಗೌಡ್ರು ಬಣ) ಗಂಗಾವತಿ ತಾಲೂಕ ಅಧ್ಯಕ್ಷರಾದ ಯಮನೂರ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಇಂದು ವಿಸರ್ಜಿತ ಆಹಾರ ಸೇವಿಸಿ ಮೃತಪಟ್ಟಿರುವ ಕುರಿಗಳ ಮಾಲಿಕರಿಗೆ ಪರಿಹಾರಧ ವಿತರಿಸಲು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈ ಘಟನೆ ಅತ್ಯಂತ ಅದ್ದೂರಿಯಾಗಿ ಜರುಗಿದ ಆನೆಗೊಂದಿ ಉತ್ಸವಕ್ಕೆ ಕಳಂಕ ತಂದಂತಾಗಿದೆ.

ಈ ಐತಿಹಾಸಿಕ ಆನೆಗೊಂದಿ ಉತ್ಸವ ನಡೆದಲು ಅಲ್ಪಾವಧಿಯಲ್ಲಿಯೇ ತೀರ್ಮಾನಿಸಿ, ಶಿಸ್ತುಬದ್ಧವಾಗಿ ತಯಾರಿ ನಡೆಸಿ ಉತ್ಸವದ ಯಶಸ್ವಿಗೆ ಅತ್ಯಂತ ಕಾಳಜಿ ಹಾಗೂ ಉತ್ಸಾಹದಿಂದ ಶ್ರಮಿಸಿದ ಮಾನ್ಯ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಸಾರ್ವಜನಿಕರಿಗೆ ಪ್ರಶಂಸನೆಗೆ ಪಾತ್ರರಾಗಿದ್ದು, ಆದರೆ ಈ ದುರ್ಘಟನೆ ಶಾಸಕರಿಗೂ, ಜಿಲ್ಲಾಡಳಿತಕ್ಕೂ ಕಪ್ಪುಚುಕ್ಕೆ ಮೂಡಿಸಿದಂತಾಗಿದೆ. ಇದರಿಂದಾಗಿ ಚಿಕ್ಕಬೆಣಕಲ್, ಆನೆಗೊಂದಿ ಮತ್ತು ಮಲ್ಲಾಪುರ ಗ್ರಾಮದ ಕುರಿಗಾಹಿಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಆದ್ದರಿಂದ ಈ ಅಹಿತಕರ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೂಡಲೇ ಜಿಲ್ಲಾಧಿಕಾರಿಗಳು ಕುರಿಗಾಹಿಗಳಿಗೆ ಪರಿಹಾರ ನೀಡುವಂತೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕು ಘಟಕ ಒತ್ತಾಯಿಸಿದೆ, ತಪ್ಪಿದಲ್ಲಿ ಗಂಗಾವತಿ ತಾಲೂಕ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯಮನೂರಭಟ್ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪವನಕುಮಾರ ಗಡ್ಡಿ, ಹನುಮೇಶ ಕುರುಬರ, ಸುನೀಲಕುಮಾರ ಕುಲಕರ್ಣಿ, ಸುರೇಶಕುಮಾರ ಚನ್ನಳ್ಳಿ, ನಹೀಮ್ ಪಾಷಾ, ಮುತ್ತುರಾಜ, ಹುಲಿಯಪ್ಪ ಹಾರೆಗರ, ರಮೇಶಕುಮಾರ, ಅಂಬಾಸ್, ನಾಸೀರ್ ಹುಸೇನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!