ನವದೆಹಲಿ: ಬಹುನಿರೀಕ್ಷಿತ 18ನೇ ಲೋಕಸಭಾ ಚುನಾವಣೆಯು ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಮೇ 13ರಂದು ಮತದಾನ ಆರಂಭವಾಗಲಿದ್ದು ಜೂನ್ 4ಕ್ಕೆ ಫಲಿತಾಂಶ ಹೊರ ಬೀಳಲಿದೆ.
ಮಧ್ಯಾಹ್ನ 3 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಯಿತು.
ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ. ರಾಷ್ಟ್ರಕ್ಕೆ ನಿಜವಾದ ಹಬ್ಬ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ನಾವು ಬದ್ಧರಾಗಿದ್ದೇವೆ. 17ನೇ ಲೋಕಸಭೆಯ ಅವಧಿಯು 2024ರ ಜೂನ್ 16ರಂದು ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ಹೇಳಿದರು.
97 ಕೋಟಿ ಮತದಾರರು
ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. ಇವರಲ್ಲಿ 49.70 ಕೋಟಿ ಪುರುಷ ಮತದಾರರು ಹಾಗೂ 47.10 ಕೋಟಿ ಮಹಿಳಾ ಮತದಾರರಿದ್ದಾರೆ. 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷರ ಮತದಾರರಿಗಿಂತ ಹೆಚ್ಚಾಗಿದೆ. 1.8 ಕೋಟಿ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವವರಿದ್ದಾರೆ ಮತ್ತು 20-29 ವರ್ಷದೊಳಗಿನ 19.47 ಕೋಟಿ ಮತದಾರರಿದ್ದಾರೆ. 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ ಮತ್ತು 48 ಸಾವಿರ ತೃತೀಯಲಿಂಗಿ ಮತದಾರರಿದ್ದಾರೆ.
55 ಲಕ್ಷ ಇವಿಎಂಗಳು
ಚುನಾವಣೆಗಾಗಿ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 55 ಲಕ್ಷ ಮತಯಂತ್ರ (ಇವಿಎಂ) ಗಳು, 4 ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ತಿಳಿಸಿದರು.
85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೆ ಮತದಾನ ವ್ಯವಸ್ಥೆ
ಮತಗಟ್ಟೆಗಳಲ್ಲಿ ಹೆಲ್ಪ್ ಡೆಸ್ಕ್ ಮತ್ತು ವ್ಹೀಲ್ಚೇರ್ ವ್ಯವಸ್ಥೆಯನ್ನು ಮಾಡಲಾಗುವುದು. 80 ವರ್ಷ ಮೇಲ್ಪಟ್ಟ ಮತದಾರರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಸಹ ಮಾಡಲಾಗುವುದು. 85 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಇದ್ದರೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ತಪಾಸಣೆಗಾಗಿ ಚೆಕ್ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಗಡಿಭಾಗಗಳಲ್ಲಿ ಡ್ರೋನ್ ಮೂಲಕ ಪರೀಶಿಲನೆ ನಡೆಸಲಾಗುತ್ತದೆ.
ದ್ವೇಷ ಭಾಷಣವನ್ನು ಮಾಡುವಂತಿಲ್ಲ
ಚುನಾವಣೆಗೆ ಆಮಿಷ ಒಡ್ಡುವಂತಿಲ್ಲ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ಸೂಕ್ಷ್ಮ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ. 2100 ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗುತ್ತದೆ. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ರಾಜಕೀಯ ನಾಯಕರು ಯಾವುದೇ ದ್ವೇಷ ಭಾಷಣವನ್ನು ಮಾಡುವಂತಿಲ್ಲ. ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 52 ಸ್ಥಾನಗಳಿಗೆ ಕುಸಿಯಿತು. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನವನ್ನು ಪಡೆಯಲು ಬೇಕಾದ ಸಂಖ್ಯೆಯು ಸಹ ಕಾಂಗ್ರೆಸ್ಗೆ ಸಿಗಲಿಲ್ಲ