ಕೊಪ್ಪಳ ಡಿಸೆಂಬರ್ 30 (ಕರ್ನಾಟಕ ವಾರ್ತೆ): ಸಾಮಾನ್ಯವಾಗಿ ಎಲ್ಲರೂ ಗ್ರಾಹಕರಾಗಿದ್ದು, ಗ್ರಾಹಕರು ತಮ್ಮ ಹಕ್ಕಿನ ಜೊತೆಗೆ ಕರ್ತವ್ಯಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎ.ಜಿ ಮಾಲ್ದರ್ ಹೇಳಿದರು.


ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಹೊಸಪೇಟೆ ರಸ್ತೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಅಜಾದ್ ಭವನದಲ್ಲಿ ಡಿಸೆಂಬರ್ 29 ರಂದು ಆಯೋಜಿಸಲಾಗಿದ್ದ

“ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2022’’ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಒಂದು ವಸ್ತುವನ್ನು ಕೊಂಡುಕೊಳ್ಳುವ ಅಥವಾ ಮಾರಾಟ ಮಾಡುವ ಪ್ರತಿಒಬ್ಬರೂ ಗ್ರಾಹಕರೇ ಆಗಿದ್ದಾರೆ.

ವಸ್ತುಗಳನ್ನು ಕೊಂಡು ಕೊಳ್ಳುವ ಮುನ್ನ ನಮ್ಮ ಕರ್ತವ್ಯಗಳನ್ನು ಪಾಲನೆ ಮಾಡಬೇಕು. ಅದರಂತೆ ವಸ್ತುಗಳ ಗುಣಮಟ್ಟ ಪರಿಶೀಲನೆ, ಅದರ ಬಗ್ಗೆ ಜ್ಞಾನ, ಪಾಲಿಸಿಗಳ ಬಗ್ಗೆ ಗಮನ ಹರಿಸುವುದು, ದರ, ಉತ್ಪಾದಕರ ವಸ್ತುಗಳ ಖರೀದಿ, ಎಂ.ಆರ್.ಪಿ ದರ ಪರಿಶೀಲನೆಯಂತಹ ಸಾಮಾನ್ಯ ನಿಯಮಗಳನ್ನು ಪಾಲನೆ ಮಾಡಬೇಕು. “ಗ್ರಾಹಕ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ’’ ಎಂಬುವುದು ಈ ವರ್ಷದ ಘೋಷ ವಾಕ್ಯವಾಗಿದ್ದು, ದಿನನಿತ್ಯದ ವ್ಯವಹಾರಗಳಲ್ಲಿ ವಂಚನೆಗೆ ಹಾಗೂ ಶೋಷಣೆಗೆ ಒಳಗಾಗುವ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ, ಪರಿಹಾರ ಪಡೆಯಬಹುದಾಗಿದೆ ಎಂದರು.


ಗ್ರಾಹಕನು ತನಗೆ ಬೇಕಾದ ವಸ್ತುಗಳನ್ನು ಯೋಗ್ಯ ಮತ್ತು ಪೈಪೋಟಿ ದರದಲ್ಲಿ ಅವಶ್ಯವೆನಿಸಿದಾಗ ಪಡೆಯುವ ಹಕ್ಕು. ಜೀವನಕ್ಕೆ ಮತ್ತು ಆಸ್ತಿ ಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸರಕುಗಳ ಮಾರಾಟ ವಿರುದ್ಧ ರಕ್ಷಣೆ ಪಡೆಯುವ ಹಕ್ಕು. ಗ್ರಾಹಕನು ತಾನು ಕೊಳ್ಳುವ ವಸ್ತುವಿನ ಯೋಗ್ಯ ಬೆಲೆ, ಗುಣಮಟ್ಟ, ಉಪಯುಕ್ತತೆ ಬಗ್ಗೆ ಮಾಹಿತಿ ಪಡೆಯುವ ಹಕ್ಕು. ಅನುಚಿತ ವ್ಯಾಪಾರ ವ್ಯವಹಾರದಿಂದ ರಕ್ಷಣೆ ಪಡೆಯುವ ಹಕ್ಕು. ಗ್ರಾಹಕ ತನ್ನ ಕುಂದು ಕೊರತೆಗಳನ್ನು ಸಂಬಂಧಿಸಿದ ಗ್ರಾಹಕರ ಆಯೋಗಗಳಿಂದ ಪರಿಹಾರಿಸಿಕೊಳ್ಳುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು ಹೀಗೆ ಆರು ವಿಧದ ಹಕ್ಕುಗಳು ಎಲ್ಲಾ ಗ್ರಾಹಕರಿಗೆ ಇವೆ. ಮೊಬೈಲ್, ಟಿವಿ ಹಾಗೂ ಇನ್ನಾವುದೇ ರೀತಿಯ ಎಲೆಕ್ಟಾçನಿಕ್ ವಸ್ತುಗಳ ಖರೀಯಲ್ಲಿ ತಮಗೆ ಅನ್ಯಾಯವಾದರೆ 2 ವರ್ಷಗಳ ಅವಧಿಯೊಳಗೆ ಪಕ್ಕಾ ಅಥವಾ ತಮ್ಮ ವಸ್ತುಗಳ ಖರೀದಿಯ ವ್ಯಾಲಿಡಿಟಿ ಒಳಗಡೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಬಗೆಹರಿಸಿಕೊಳ್ಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಗ್ರಾಹಕರ ಆಯೋಗದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕರಪತ್ರ ಬಿಡುಗಡೆಗೊಳಿಸಿ, ಬಳಿಕ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ ಆಗಿದ್ದು, ಎಲ್ಲರಿಗೂ ಗ್ರಾಹಕರ ಕಾಯ್ದೆ ಬಗ್ಗೆ ಕಾನೂನು ಅಗತ್ಯವಾಗಿದೆ. ಅಂಗಡಿಗಳ ಮಾಲೀಕರು ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ, ನಾವು ಅವರಿಗೆ ಕಾನೂನಿನ ಮೂಲಕ ಮಾತನಾಡಬಹುದು.

ಈ ಬಗ್ಗೆ ಗ್ರಾಹಕರ ವೇದಿಕೆಯ ಮೂಲಕ ವಸ್ತು ಅಥವಾ ಸೇವೆಯಲ್ಲಿನ ಕೊರತೆ, ನ್ಯೂನತೆಯನ್ನು ನಿವಾರಿಸಿಕೊಳ್ಳಬಹುದು. ಮಾರಾಟಗಾರರು ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ.) ಗಿಂತ ಹೆಚ್ಚು ಬೆಲೆ ಪಡೆದರೆ ಕೂಡಲೇ ದೂರು ದಾಖಲಿಸಬಹುದು ಎಂದು ಹೇಳಿದರು.


ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗಿರೀಶಗೌಡ ಎಸ್.ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ್ ಕೊಕರೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯರಾದ ಜಿ.ಎಸ್ ಸೌಭಾಗ್ಯಲಕ್ಷ್ಮೀ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ರಾಜೇಂದ್ರ ಗಡಾದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಅವರು ಸ್ವಾಗತಿಸಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬದಿಯುದ್ದೀನ್ ನವೀದ್ ಅವರು ಕಾರ್ಯಕ್ರಮ ನಿರೂಪಿಸಿದರು. ಆಹಾರ ಇಲಾಖೆ ಶಿರಸ್ತೆದಾರ ಮಲ್ಲಿಕಾರ್ಜುನ ಅವರು ಆರಂಭದಲ್ಲಿ ಪ್ರಾರ್ಥನೆ ಗೈದರು, ಆಹಾರ ಇಲಾಖೆ ಸಹಾಯಕ ನಿರ್ದೇಶಕರಾದ ದೇವರಾಜ ಅವರು ವಂದನಾರ್ಪಣೆ ಮಾಡಿದರು. ಗ್ಯಾಸ್ ಅಡ್ವೈಜರ್ ವಿರೇಶ ಅಂಗಡಿ ಅವರು ಅಡುಗೆ ಅನಿಲದ ಸುರಕ್ಷತೆ, ಉಪಯೋಗಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

error: Content is protected !!