ಕೋವಿಡ್ 4ನೇ ಅಲೆ: ಭಯ ಬೇಡ ಜಾಗೃತೆ ಇರಲಿ*

ಕೊಪ್ಪಳ ಡಿಸೆಂಬರ್ 30 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್ 4ನೇ ಅಲೆಯ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕೋವಿಡ್-19 ಸಂಭಾವ್ಯ 4ನೇ ಅಲೆಯ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಡಿಸೆಂಬರ್ 29 ರಂದು ಪೂರ್ವಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು.


ಕೋವಿಡ್-19 ಖಾಯಿಲೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ರಾಜ್ಯದಲ್ಲಿ ಅಲ್ಲಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಕೋವಿಡ್ ಸಂಭಾವ್ಯ 4ನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ತಯಾರಿ ಮಾಡುವುಕೊಳ್ಳುವುದರ ಜತೆಗೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಊಟದ ವ್ಯವಸ್ಥೆ, ಬಿಸಿ ನೀರು ಹೀಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


ಕೋವಿಡ್ ನಿರ್ವಹಣೆಗಾಗಿ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್, ಡ್ಯೂರಾ ಸಿಲಿಂಡರ್, ಜಂಬೂ ಸಿಲಿಂಡರ್, ಸಣ್ಣ ಆಕ್ಸಿಜನ್ ಸಿಲಿಂಡರ್‌ಗಳು, ಆಕ್ಸಿಜನ್ ಕಾನ್ಸನ್‌ಟ್ರೇಟರ್, ಆಕ್ಸಿನ್ ಉತ್ಪಾದಕಾ ಘಟಕಗಳು ಸುಸ್ಥಿಯಲ್ಲಿರುವ ಬಗ್ಗೆ ನೋಡಿಕೊಳ್ಳಬೇಕು.

ಆಕ್ಸಿಜನ್ ಸರಬರಾಜುಗೆ ಸಂಬಂಧಿಸದಂತೆ ಕ್ರಮ ಕೈಗೊಳ್ಳಿ. ಆಸ್ಪತ್ರೆಗಳಲ್ಲಿ ಬೆಡ್, ಔಷಧಿ, ಮಾಸ್ಕ್, ಪಿ.ಪಿ.ಇ ಕಿಟ್ ವ್ಯವಸ್ಥೆಯ ಜೊತೆಗೆ  ವೆಂಟಿಲೇಟರ್ಸ ಸುಸ್ತಿಯ ಬಗ್ಗೆ ಪರಿಶೀಲಿಸಿಕೊಂಡು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


ಅಲ್ಲದೇ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯಾಧಿಕಾರಿಗಳು, ಸ್ಟಾಫ್ ನರ್ಸ್ ಮತ್ತು ಕೋವಿಡ್ ಸೇವೆಗೆ ಭಾಗವಹಿಸುವಂತಹ ಅಧಿಕಾರಿ ಸಿಬ್ಬಂದಿಗಳಿಗೆ ಕೋವಿಡ್ ನಿರ್ವಹಣೆಗೆ ಕುರಿತಂತೆ ಒಂದು ಸುತ್ತಿನ ತರಬೇತಿಯನ್ನು ನೀಡಬೇಕು ಎಂದು ಹೇಳಿದರು.


ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯಾ ತರಶೀಲ್ದಾರರ ಅಧ್ಯಕ್ಷತೆಯಲ್ಲಿ ಕೋವಿಡ್ ಕುರಿತಂತೆ ತಾಲ್ಲೂಕು ಮಟ್ಟದ ಸಭೆಗಳನ್ನು ನಿರಂತರವಾಗಿ ಮಾಡಿ, ಕ್ರಮ ತೆಗೆದು ಕೊಳ್ಳಬೇಕು. ಕೋವಿಡ್ ಮುಂಜಾಗೃತಗಾಗಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಆಯಾ ನಗರಸಭೆ, ಪುರಸಭೆ ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಸೂಕ್ತ ಜಾಗೃತಿ ಮೂಡಿಸಬೇಕು. ಮಾಸ್ಕ ಧರಿಸುವಂತೆ ನಾಮಫಲಕ ಪ್ರದರ್ಶನ ಮಾಡಬೇಕು ಮತ್ತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ತಾ.ಪಂ. ಕಾರ್ಯನಿರ್ವಾಹಕರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.


*ಸಾರ್ವಜನಿಕರಲ್ಲಿ ಮನವಿ:*
ಸಂಭಾವ್ಯ 4ನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆರೋಗ್ಯ ಇಲಾಖೆಯ ಪೂರ್ವತಯಾರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಒಟ್ಟು 1374 ಬೆಡ್‌ಗಳು ಇದ್ದು, ಅದರಲ್ಲಿ 654 ಆಕ್ಸಿಜನ್ ಸೌಲಭ್ಯವಿರುವ ಬೆಡ್‌ಗಳಿವೆ. ಒಟ್ಟು 173 ವೆಂಟಿಲೇಟರ್‌ಗಳಲ್ಲಿ ಮಕ್ಕಳಿಗಾಗಿ 35 ವೆಂಟಿಲೇಟರ್‌ಗಳು ಲಭ್ಯವಿವೆ. ಖಾಸಗಿ ಆಸ್ಪತ್ರೆಗಳಲ್ಲಿ 427 ಬೆಡ್‌ಗಳು ಲಭ್ಯವಿದ್ದು, 293 ಆಕ್ಸಿಜನ್ ಸೌಲಭ್ಯವಿರುವ ಬೆಡ್‌ಗಳು ಹಾಗೂ 42 ವೆಂಟಿಲೇಟರ್‌ಗಳಿವೆ.

ಹೀಗಾಗಿ ಚಿಕಿತ್ಸೆಗೆ ಯಾವುದೆ ರೀತಿಯ ಕೊರತೆ ಇಲ್ಲ. ಹೀಗಾಗಿ ಸಾರ್ವಜನಿಕರು ಕೋವಿಡ್ ಬಗ್ಗೆ ಭಯಪಡದೇ ಜಾಗೃತೆಯಿಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಹೆಚ್. ಅವರು ಮಾತನಾಡಿ,


ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕಾ ಆಸ್ಪತ್ರೆಗಳಲ್ಲಿ ಒಂದರಂತೆ ಒಟ್ಟು 4 ಪಿ.ಎಸ್.ಎ ಪ್ಲಾಂಟ್‌ಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಂದು 6-ಕೆ.ಎಲ್.ಎಲ್.ಎಂ.ಓ ಟ್ಯಾಂಕ್ ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟು 11 ಡ್ಯೂರಾ ಸಿಲಿಂಡರ್‌ಗಳು, 513 ಜಂಬೂ ಸಿಲಿಂಡರ್‌ಗಳು, 204 ಸಣ್ಣ ಆಕ್ಸಿಜನ್ ಸಿಲಿಂಡರ್‌ಗಳು, 483 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳಿವೆ. ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿದ್ದು, ಹೆಚ್ಚಿನ ದಾಸ್ತಾನಿಗಾಗಿ ಇಂಡೆಂಟ್ ಮಾಡಲಾಗುತ್ತಿದೆ. ಕೋವಿಡ್ ಪರೀಕ್ಷೆಯು ಪ್ರತಿದಿನ 150 ಗುರಿಯನ್ನು ನೀಡಲಾಗಿದ್ದು, ಕಳೆದ ಕೆಲವು ದಿನಗಳಿಂದ 250 ರಷ್ಟು ಸಾಧನೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ ವ್ಹಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಲಸಿಕಾಕರಣವನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿಯವರೆಗೂ 11,55,459 ಪ್ರಥಮ ಡೋಸ್, 11,58,491 ದ್ವಿತೀಯ ಡೋಸ್ ಮತ್ತು 3,03,040 ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ವಿವರಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಕಿಮ್ಸ್ ನಿರ್ದೇಶಕರಾದ ಡಾ. ವೈಜನಾಥ ಇಟಗಿ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಈಶ್ವರ ಸವಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳಾದ ಡಾ. ರಮೇಶ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

error: Content is protected !!