ಕೊಪ್ಪಳ ಡಿಸೆಂಬರ್ 29 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಗರದ ಹಾಗೂ ಸುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಅವಶ್ಯಕತೆ ಇರುವಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಬೇಕು. ಜಾತ್ರಾ ಸ್ಥಳದಲ್ಲಿ 3 ಔಟ್ ಪೊಲೀಸ್ ಸ್ಟೇಷನ್ ನಿರ್ಮಿಸಬೇಕು. ರಥೋತ್ಸವಕ್ಕೆ ಆಗಮಿಸುವ ವೃದ್ಧರು, ವಿಕಲಚೇತನರಿಗೆ ಪಾರ್ಕಿಂಗ್ ಸ್ಥಳದಿಂದ ರಥೋತ್ಸವ ಸ್ಥಳಕ್ಕೆ ಸುಸಜ್ಜಿತ ಮತ್ತು ಪರವಾನಿಗೆ ಹೊಂದಿದ ಆಟೋಗಳನ್ನು ಗುರುತಿಸಬೇಕು. ಗವಿಮಠ ಸಂಸ್ಥೆಯಿಂದ ನೀಡಲ್ಪಟ್ಟ ಲೇಬಲ್‌ಗಳು ಅಂಟಿಸಿದ ಆಟೋಗಳನ್ನು ನಿರ್ಭಂಧಿತ ಸ್ಥಳಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು.
ಜಾತ್ರೆಗೆ ಆಗಮಿಸುವ ವಾಹನಗಳ ನಿಲುಗಡೆಗೆ ಸ್ಥಳವನ್ನು ಗುರುತಿಸಿ, ಪಾರ್ಕಿಂಗ್ ನಕಾಶೆಯ ಬ್ಯಾನರಗಳನ್ನು ಅಳವಡಿಸಬೇಕು. ಹಾಗೂ ವಾಹನಗಳ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಅವಶ್ಯಕವಿದ್ದಲ್ಲಿ ಗೃಹರಕ್ಷಕರನ್ನು ನಿಯೋಜಿಸುವುದರ ಬಗ್ಗೆಯೂ ಹಾಗೂ ವಿಶೇಷ ಅಹ್ವಾನಿತರನ್ನು ಕರೆತರಲು ಕಾನ್ವೇ ವ್ಯವಸ್ಥೆಯನ್ನು ಮಾಡಲು ಕ್ರಮ ವಹಿಸಬೇಕ ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.