ಕೊಪ್ಪಳ ಜೂನ್ 18 : ಜಂಟಿ ಕೃಷಿ ನಿರ್ದೇಶಕಾರದ ರುದ್ರೇಶಪ್ಪ ಮತ್ತು ಗಂಗಾವತಿ ಸಹಾಯಕ ಕೃಷಿ ನಿರ್ದೇಶಕಾರದ ಸಂತೋಷ್ ಪಟ್ಟದಕಲ್ ಅವರು ರಾಯಚೂರು ಕೃಷಿ ವಿವಿಯ ಸಂಶೋಧಕರ ತಂಡದದೊಂದಿಗೆ ಕನಕಗಿರಿ ತಾಲೂಕು ವ್ಯಾಪ್ತಿಯ ಚಿಕ್ಕಖೇಡ, ಹಿರೇಖೇಡ, ಗುಡುದೂರು ಗ್ರಾಮಗಳಲ್ಲಿ ಜೂನ್ 18ರಂದು ಸಂಚರಿಸಿ ಬಿತ್ತನೆಯಾದ ಹತ್ತಿಬೆಳೆಯಲ್ಲಿ ಕೆಂಪು ರೋಗ ಹಾಗೂ ಬೆಳೆ ಕುಂಠಿತವಾದ ಬಗ್ಗೆ ಪರಿಶೀಲಿಸಿದರು.
ಬಿತ್ತನೆ ಬೀಜ, ರಸಗೊಬ್ಬರದ ಬಳಕೆ, ನೀರಿನ ವ್ಯವಸ್ಥೆ, ವಿದ್ಯುತ್ ಲಭ್ಯತೆ ಕುರಿತು ಮಾಹಿತಿ ಪಡೆದು ಸಂಬಂಧಿಸಿದ ಹೋಬಳಿ ಅಧಿಕಾರಿಗಳಿಗೆ ಹತ್ತಿ ಬೆಳೆಯ ಬಿತ್ತನೆ ಕ್ಷೇತ್ರ ಹಾಗೂ ಬಿತ್ತನೆಗೆ ಉಪಯೋಗಿಸಿದ ತಳಿ ಮತ್ತು ಉತ್ಪಾದನೆ ಮಾಡಿದ ಕಂಪನಿಯ ಮಾಹಿತಿ ಪಡೆಯಲು ಸೂಚಿಸಿದರು.
ಪಟ್ಟಣದ ವಿವಿಧ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸಹ ಕೃಷಿ ವಿವಿಯ ತಂಡದೊಂದಿಗೆ ಭೇಟಿ ನೀಡಿ ಹತ್ತಿ ಬೆಳೆಯ ಬಿತ್ತನೆ ಬೀಜದ ಕುರಿತು ಪರಿಶೀಲಿಸಿ ವಿವಿಧ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಿದರು. ಪರಿಕರ ಮಾರಾಟಗಾರರು ಕಡ್ಡಾಯ ದರಪಟ್ಟಿ ಪ್ರದರ್ಶಿಸಬೇಕು. ರೈತರು ಖರೀದಿಸುವ ಪರಿಕರಿಗಳಿಗೆ ತಪ್ಪದೇ ರಸೀದಿ ನೀಡಲು ಹಾಗು ರಸಗೊಬ್ಬರಗಳನ್ನು ಪಿ.ಒ.ಎಸ್ ಮುಖಾಂತರ ಮಾರಾಟ ಮಾಡಲು ಮತ್ತು ಯಾವದೇ ಬಿತ್ತನೆ ಬೀಜ ಖರೀದಿಸಲು ಬರುವ ರೈತರಿಗೆ ಕೃಷಿ ವಿವಿಯಿಂದ ಶಿಫಾರಸ್ಸು ಮಾಡಲಾದ ಬೇಸಾಯ ಕ್ರಮಗಳ ಮಾಹಿತಿ ನೀಡಲು ತಿಳಿಸಿದರು.

ಕೃಷಿ ವಿವಿಯ ಸಂಶೋಧನ ತಂಡದ ಮುಖ್ಯಸ್ಥರಾದ ಎಂ.ಜೆ. ನಿಡಗುಂದಿ, ಬೇಸಾಯ ಶಾಸ್ತ್ರದ ಪ್ರಾಧ್ಯಾಪಕರಾದ ಎಂ. ವೈ. ಅಜಯ್‌ಕುಮಾರ, ಸಸ್ಯರೋಗ ಪ್ರಾಧ್ಯಾಪಕ ಎಸ್.ಬಿ. ಗೌಡರ, ಕೀಟಶಾಸ್ತ್ರದ ಪ್ರಾಧ್ಯಾಪಕ ಎಸ್.ಜಿ. ಹಂಚಿನಾಳ ಅವರು ನಾನಾ ಕೇತ್ರಗಳಿಗೆ ಭೇಟಿ ನೀಡಿ ಬೆಳೆಯ ಕುರಿತು ಮೂರರಿಂದ ನಾಲ್ಕು ದಿನಗಳೊಳಗೆ ವಿಸ್ತೃತ ವರದಿಯನ್ನು ಸಂಶೋಧನಾ ನಿರ್ದೇಶಕರಿಗೆ ನೀಡಲಾಗುವುದೆಂದು ತಿಳಿಸಿದರು.
ಈ ವೇಳೆಯಲ್ಲಿ ತಾಲೂಕಿನ ಹೋಬಳಿಗಳ ಕೃಷಿ ಅಧಿಕಾರಿಗಳಾದ ನಾಗರಾಜ್, ನವೀನ್ ಮತ್ತು ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.