ಕೊಪ್ಪಳ ಜೂನ್ 18 : ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಜೂನ್ 17ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರು. ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಸಂಚರಿಸಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸೇರಿದಂತೆ ನಾನಾ ಮೂಲಸೌಲಭ್ಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಮಳೆಯಿಂದಾದ ಹಾನಿ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ಮಾಹಿತಿ ಪಡೆದುಕೊಂಡರು.

ಕನಕಗಿರಿ ತಾಲೂಕಿಗೆ ಭೇಟಿ ನೀಡಿದ ವೇಳೆಯಲ್ಲಿ ಜಿಲ್ಲಾಧಿಕಾರಿಗಳು, ಕನಕಗಿರಿ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಈ ವೇಳೆ ಕನಕಗಿರಿ ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಪರಿಸ್ಥಿತಿ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದರು.

ಮುಖ್ಯವಾಗಿ ಮಳೆಗಾಲ ಹಿನ್ನೆಲೆಯಲ್ಲಿ ವರದಿಯಾಗುವ ಮನೆಹಾನಿ, ಜನ-ಜಾನುವಾರುಗಳ ಪ್ರಾಣಹಾನಿ ಪ್ರಕರಣಗಳ ವಿಲೇಗೆ ಹೆಚ್ಚಿನ ಒತ್ತು ಕೊಡಬೇಕು. ತಾಲೂಕಾಡಳಿತಕ್ಕೆ ಬರುವ ಸಾರ್ವಜನಿಕರ ಯಾವುದೇ ಅಹವಾಲನ್ನು ಪ್ರತಿಯೊಂದು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾವಧಾನದಿಂದ ಆಲಿಸಿ ಸ್ಪಂದನೆ ನೀಡಬೇಕು ಎಂದು ಸೂಚಿಸಿದರು.

ಮಾನವ ಜೀವಹಾನಿ ಪ್ರಕರಣಗಳಿಗೆ 24 ಗಂಟೆಯೊಳಗೆ, ಜಾನುವಾರು ಪ್ರಾಣ ಹಾನಿ ಪ್ರಕರಣಗಳು ಮತ್ತು ಮನೆ ಹಾನಿಗೆ 48 ಗಂಟೆ ಅವಧಿಯೊಳಗೆ ಪರಿಹಾರ ಕಲ್ಪಿಸಬೇಕು. ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಯಾದಲ್ಲಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ತಹಸೀಲ್ದಾರ ಅವರಿಗೆ ವರದಿ ಸಲ್ಲಿಸಬೇಕು. ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಕ್ರಮ ವಹಿಸಬೇಕು ಎಂದು ತಹಸೀಲ್ದಾರ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಕೆಲವು ಕಡೆಗಳಲ್ಲಿ ಅನಿಶ್ವಿತ ಮಳೆ ಪರಿಸ್ಥಿತಿ ತಲೆದೋರಿದೆ. ಅಂತಹ ಕಡೆಗಳಲ್ಲಿ ಜನ ಜಾನುವಾರಗಳಿಗೆ ಅನುಕೂಲವಾಗುವ ಹಾಗೆ ಸಮರ್ಪಕ ನೀರು ಪೂರೈಕೆಗೆ ಒತ್ತು ಕೊಡಬೇಕು. ಕೆರೆಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಬೋರವೆಲ್ ಮೂಲಕ ನೀರು ಪೂರೈಸುವ ಮೊದಲು ಕಡ್ಡಾಯವಾಗಿ ನೀರನ್ನು ಪರೀಕ್ಷೆಗೊಳಪಡಿಸಬೇಕು. ನೀರಿನ ಸಂಗ್ರಹಗಾರಗಳ ಮತ್ತು ಮೂಲಗಳನ್ನು ಕಾಲಕಾಲಕ್ಕೆ ಕ್ಲೋರಿನೇಶನ್‌ಗೆ ಒಳಪಡಿಸಬೇಕು. ಪೈಪುಗಳಲ್ಲಿನ ಲಿಕೇಜ್ ತಡೆಯಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಯಾವುದೇ ಸಂದರ್ಭದಲ್ಲಿ ಮಳೆಗಳು ಸುರಿಯಬಹುದು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೀರು ಗಟಾರುಗಳಲ್ಲಿ ಸರಾಗವಾಗಿ ಹರಿದು ಹೋಗುವ ಹಾಗೆ ಹೂಳು ತೆಗೆಯಬೇಕು. ಮಲೇರಿಯಾ, ಡೆಂಗೆ, ಚಿಕೂನಗುನ್ಯ, ಜಿಕಾ ವೈರಸ್ ಹರಡದಂತೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳ ಶುಚಿತ್ವಕ್ಕೆ ಒತ್ತು ಕೊಡಬೇಕು. ಜನರು ಕಾಯಿಸಿ ಆರಿಸಿದ ನೀರು ಕುಡಿಯುವಂತೆ, ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವಂತೆ ಕರಪತ್ರ ವಿತರಿಸಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಈಗಾಗಲೇ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು ರೈತರಿಗೆ ಸಮರ್ಪಕ ಬೀಜ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಬೀಜೋಪಚಾರ, ಹವಾಮಾನ ಆಧಾರಿತ ಬೆಳೆ ಸೇರಿದಂತೆ ರೈತರಿಗೆ ಕಾಲಕಾಲಕ್ಕೆ ಸಲಹೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಖಂಡ ಗಂಗಾವತಿ ತಾಲೂಕಿನಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ, ಸೂರ್ಯಕಾಂತಿ ಸೇರಿ ಜೂನ್ 15ರವರೆಗೆ 584.90 ಕ್ವಿಂಟಲ್ ದಾಸ್ತಾನು ಪೈಕಿ 173.90 ಕ್ವಿಂಟಲ್ ಮಾರಾಟವಾಗಿದ್ದು 410.12 ಕ್ವಿಂಟಲ್ ದಾಸ್ತಾನು ಇದೆ. ಕನಕಗಿರಿ ತಾಲೂಕಿನಲ್ಲಿ ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ಮನೆ ಕುಸಿದು ಮೃತಪಟ್ಟ ಇಬ್ಬರಿಗೆ ತಲಾ 5 ಲಕ್ಷ ರೂ.ಗಳಂತೆ 10 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. 1 ಜಾನುವಾರು ಹಾನಿ ಪ್ರಕರಣಕ್ಕೆ ಈಗಾಗಲೇ 32,000 ರೂ ಪರಿಹಾರ ಕಲ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಅವರು ಮಾಹಿತಿ ನೀಡಿದರು.

ಕನಕಗಿರಿ ತಾಲೂಕಿನಲ್ಲಿ ಜನವರಿ 1ರಿಂದ ಜೂನ್ 15ರವರೆಗೆ ವಾಡಿಕೆ ಮಳೆ 99.8 ಮಿಮಿ ಇದ್ದು ವಾಸ್ತವವಾಗಿ 54.5 ಮಿಮಿ ರಷ್ಟು ಮಳೆ ಸುರಿದಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 113.5 ಮಿಮಿ ಇದ್ದು ವಾಸ್ತವವಾಗಿ 68.4 ಮಿಮಿ ಮಳೆ ಸುರಿದಿದೆ ಎಂದು ಕನಕಗಿರಿ ತಹಸೀಲ್ದಾರ ಸಂಜಯ ಕಾಂಬಳೆ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಗಂಗಾವತಿ ತಹಸೀಲ್ದಾರ ಮಂಜುನಾಥ ಭೋಗಾವತಿ, ಕನಕಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ನಾಡಕಚೇರಿಗೆ ಭೇಟಿ: ಗ್ರಾಮೀಣ ಪ್ರವಾಸದಲ್ಲಿದ್ದ ಜಿಲ್ಲಾಧಿಕಾರಿಗಳು ನಾಡ ಕಚೇರಿಗೆ ಸಹ ಭೇಟಿ ನೀಡಿ ಸಾರ್ವಜನಿಕರಿಗೆ ಕೊಡುವ ಸೇವೆಗ ಬಗ್ಗೆ ಅಲ್ಲಿದ್ದ ಜನರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸೇವೆಗಳನ್ನು ನೀಡಬೇಕು ಎಂದು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಇದ್ದರು.

error: Content is protected !!