ಕೊಪ್ಪಳ ಜೂನ್ 18 : ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಮತ್ತು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ ಅವರ ನಿರ್ದೇಶನದ ಮೇರೆ ಬಸರಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ತಾಲೂಕು ಪಂಚಾಯತನಿಂದ
ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕನಕಗಿರಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಅವರು ತಿಳಿಸಿದ್ದಾರೆ.

ಬಸರಿಹಾಳ ಗ್ರಾಮದ ಎಲ್ಲಾ ಓಣಿಗಳಲ್ಲಿ ಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಎಲ್ಲಾ ಓಣಿಗಳಲ್ಲಿ ಚರಂಡಿಗಳಿಗೆ ಮೆಲಾಥಿನ್ ಮತ್ತು ಬಿಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಮುಖ್ಯ ಪೈಪ್ಸನಲ್ಲಿ ಯಾವುದೇ ಲಿಕೇಜ್ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಸದ್ಯ ಇರುವ ಹಳೆಯ ಪೈಪ್ ಲೈನ್ ಮೂಲಕ ನೀರು ಸರಬರಾಜು ತಡೆಹಿಡಿಯಲಾಗಿದೆ.

ನೀರು ಸರಬರಾಜು:*
ಟ್ಯಾಂಕರಗಳ ಮೂಲಕ ಎಲ್ಲಾ ಓಣಿಗಳಲ್ಲಿ ನೀರಿನ ವ್ಯವಸ್ಥೆ ಒದಗಿಸುವುದನ್ನು ಇಂದಿನವರೆಗೆ ಮುಂದುವರೆಸಲಾಗಿದೆ. ಗ್ರಾಮದಲ್ಲಿರುವ ಓಎಚ್ ಟಿ ಟ್ಯಾಂಕ್ ಮತ್ತು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಲಾಗಿದೆ. ಓಎಚ್ ಟಿ
ಟ್ಯಾಂಕಗೆ ಪೈಪಲೈನ್ ಮಾಡಲಾಗಿದೆ.

*ಜೆಜೆಎಂ ಕಾಮಗಾರಿ ಪ್ರಗತಿ:*
ಜೆಜೆಎಂ ಫೈಪಲೈನನ್ನು ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ  ಇಲಾಖೆಯಿಂದ ಮನೆಗಳಿಗೆ ನಳ ಜೋಡಣೆ ಮಾಡುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನು ಎರಡು ದಿನಗಳಲ್ಲಿ ಜೆಜೆಎಂ ಪೈಪಲೈನ್ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಸದ್ಯ ಟ್ಯಾಂಕರ್ ಮೂಲಕ ಎಲ್ಲಾ ಓಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

*ಡಂಗೂರ ಬಾರಿಸಿ ಜಾಗೃತಿ:*
ಗ್ರಾಮದಲ್ಲಿ ಸುಮಾರು ಬಾರಿ ಡಂಗೂರ ಹಾಕಿಸುವ ಮೂಲಕ ಸಾರ್ವಜನಿಕರಿಗೆ ಕಾಯಿಸಿ
ಆರಿಸಿದ ನೀರು ಕುಡಿಯುವದು, ಖರೀದ ಪದಾರ್ಥಗಳನ್ನು ತಿನ್ನಬಾರದು, ಬಿಸಿಯಾದ
ಆಹಾರ ಸೇವಿಸಬೇಕು ಮತ್ತು ಮನೆ ಸುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ.

*ಚಿಕಿತ್ಸಾ ಕೇಂದ್ರಗಳು:*
ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಚಿಕಿತ್ಸೆ ಪಡೆಯಲು ತೆರೆದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪ್ರತಿ ದಿನ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಜೂನ್ 13ರವರೆಗೆ ಒಟ್ಟು 34 ಜನರು ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಿರುತ್ತಾರೆ.

*ಜೂನ್ 14ರಿಂದ ಪ್ರಕರಣಗಳು ಶೂನ್ಯ:*
ಜೂನ್ 14 ರಿಂದ ಇಲ್ಲಿಯವರೆಗೆ ಯಾವುದೇ ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಪರಿಸ್ಥಿತಿಯು ಹತೋಟಿಗೆ ಬಂದಿದ್ದು, ಶೂನ್ಯ ರೋಗ ಲಕ್ಷಣಗಳು (ಸಹಜ ಸ್ಥಿತಿ) ಕಂಡುಬಂದಿದ್ದು ಜನರು ಆರೋಗ್ಯವಾಗಿದ್ದಾರೆ.

*ಕಾರ್ಯಪಡೆ ಸಭೆ:*
ಗ್ರಾಮ ಪಂಚಾಯತ ಮಟ್ಟದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಕಾರ್ಯಪಡೆಯ ಸಭೆ ನಡೆಸಿ, ಶುದ್ಧ ಕುಡಿಯುವ ನೀರು ಒದಗಿಸುವದು ಮತ್ತು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವದು ಮತ್ತು ಗ್ರಾಮಸ್ತರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಕ್ರಮ ವಹಿಸುವುದಕ್ಕೆ ತೀರ್ಮಾನಿಸಲಾಗಿದೆ.

*ಪ್ರತಿ ದಿನ ಮನೆಮನೆಗೆ ಭೇಟಿ:* ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ ಪಿಡಿಓ ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ ಮಟ್ಟದ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಪಡೆ ಸಮಿತಿ ಸದಸ್ಯರು ಸೇರಿ ಪ್ರತಿದಿನ ಮನೆಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿ ಕಾಯಿಸಿ ಆರಿಸಿದ ನೀರು ಕುಡಿಯುವಂತೆ, ಮನೆಯ ಸುತ್ತಲು ಸ್ವಚ್ಚತೆ ಕಾಪಾಡುವಂತೆ ಮತ್ತು ವೈಯಕ್ತಿಕ ಶೌಚಾಲಯ ಕಡ್ಡಾಯ ಬಳಸುವಂತೆ, ಸೋಪಿನಿಂದ ಕೈ ತೊಳೆದುಕೊಳ್ಳುವಂತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಲಾಗಿದೆ.

*ಮಕ್ಕಳಿಗೂ ಜಾಗೃತಿ:*
ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಸೇರಿಸಿ ಸಹ ಆರೋಗ್ಯ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಅಂಗನವಾಡಿ ಹಾಗೂ ಶಾಲೆಗಳಿಗೆ ಗ್ರಾಮ ಪಂಚಾಯತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯು ಭೇಟಿ ನೀಡಿ ಪ್ರಾತ್ಯಕ್ಷಿಕೆ‌ ಮೂಲಕ ಶುಚಿತ್ವದ ಬಗ್ಗೆ ತಿಳಿಸಿದ್ದಾರೆ.

*ನೀರಿನ ತಪಾಸಣೆ:*
ಗ್ರಾಮದಲ್ಲಿರುವ ಕುಡಿಯುವ ನೀರಿನ ಸ್ಥಾವರಗಳಿಂದ ಸರಬರಾಜು ಆಗುತ್ತಿರುವ ನೀರಿನ ತಪಾಸಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಗ್ರಾಮದಲ್ಲಿ
ಹೊಸದಾಗಿ ಬೋರವೆಲ್ ಕೊರೆಯಿಸಲಾಗಿದೆ.

*ಜನರು ಆರೋಗ್ಯವಾಗಿದ್ದಾರೆ:*
ಬಸರಿಹಾಳ ಗ್ರಾಮದಲ್ಲಿ ನಾಲ್ಕೈದು ದಿನಗಳಿಂದ ಯಾವುದೇ ವಾಂತಿ ಬೇಧಿ ಪ್ರಕರಣಗಳು ಕಂಡು ಬಂದಿರುವದಿಲ್ಲ. ಗ್ರಾಮದಲ್ಲಿ ಎಲ್ಲರು ಆರೋಗ್ಯವಾಗಿದ್ದಾರೆ‌ ಎಂದು ತಾಪಂ ಇಓ ಅವರು ತಿಳಿಸಿದ್ದಾರೆ.

error: Content is protected !!