ಕೋಪ್ಪಳ: ನವಜಾತ ಹೆಣ್ಣು ಮಗುವನ್ನು ತಾಯಿಯೊಬ್ಬಳು ಯಾರೂ ಇಲ್ಲದ ಜಾಗದಲ್ಲಿ ಎಸೆದು ಹೋಗಿರುವ ಮನಕಲಕುವ ಘಟನೆ ಗಂಗಾವತಿ ತಾಲೂಕಿನ ಪ್ರಗತಿ ನಗರ ಬಳಿ ನಡೆದಿದೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ.
ಮುಳ್ಳಿನ ಪೊದೆಯಲ್ಲಿ ಅಳುವಿನ ಶಬ್ದ ಕೇಳಿ ಪರಿಶೀಲಿಸಿದಾಗ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಬಳಿಕ ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಮೈಮೇಲೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಸದ್ಯ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ. ಚಿಕಿತ್ಸೆಯ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಹಸ್ತಾಂತರ ಮಾಡಲಿದ್ದಾರೆ. ಈ ಬಗ್ಗೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.