ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಖಾಸಗಿ ಬಸ್ ಮಾಲೀಕರ ಹೊಟ್ಟೆ ಮೇಲೆ ಹೊಡೆದಿದೆ ಎಂದು ತುಮಕೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.


ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿ ಜೂ.11ರಿಂದ ಜಾರಿಗೆ ಬರುತ್ತಿದ್ದು, ಇದರಿಂದ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲಕ ಬಸವರಾಜ್, ಉಚಿತ ಬಸ್ ಪ್ರಯಾಣ ಯೋಜನೆಯಿಂದಾಗಿ ತುಮಕೂರು ಜಿಲ್ಲೆಯ ಖಾಸಗಿ ಬಸ್ ಮಾಲೀಕರಿಗೆ ತೊಂದರೆಯಾಗಿದೆ. ಸರ್ಕಾರಿ ಬಸ್‌ಗಳಿಗೆ ನೀಡುವ ನೆರವು ಖಾಸಗಿ ಬಸ್ ಮಾಲೀಕರಿಗೂ ನೀಡಬೇಕು. ನಾವೂ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದು ನಮ್ಮ ಹೊಟ್ಟೆಗೆ ಹೊಡೆದಂತೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದ್ದು, ಖಾಸಗಿ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣಿಸುತ್ತಿಲ್ಲವಾದ್ದರಿಂದ ಬಸ್ ಓಡಿಸಬೇಕೋ ಅಥವಾ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೋ ? ಡೀಸೆಲ್ ಬೆಲೆ ಹೆಚ್ಚಿರುವ ಕಾರಣ ಡೀಸೆಲ್ ಗೆ ಸಬ್ಸಿಡಿ ನೀಡಿ, ಇಲ್ಲವೇ ವಿಧಿಸಿರುವ ತೆರಿಗೆಯನ್ನು ಮನ್ನಾ ಮಾಡಿ ಎಂದು ಬಸವರಾಜ್ ಸರ್ಕಾರಕ್ಕೆ ಮನವಿ ಮಾಡಿದರು.

ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಖಾಸಗಿ ಬಸ್‌ಗಳನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಿ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ವ್ಯವಸ್ಥೆಗೆ ಪರ್ಯಾಯವಾಗಿ ಬಸ್ ಮಾಲೀಕರು ಹಾಗೂ ಚಾಲಕರು ಆರ್ಥಿಕವಾಗಿ ಸಬಲರಾಗಲು ಸರಕಾರ ದಾರಿ ತೋರಬೇಕಿದೆ. ನಾವು ಪ್ರತಿ ವರ್ಷ 70 ರಿಂದ 80 ಸಾವಿರ ವಿಮೆಯನ್ನು ಪಾವತಿಸುತ್ತೇವೆ. ಮುಂದಿನ ದಿನಗಳಲ್ಲಿ ಉಚಿತ ಬಸ್ ಯೋಜನೆ ಜಾರಿಯಿಂದ ತೆರಿಗೆ ಪಾವತಿ ಹೇಗೆ? ನಮಗೆ ವಿಮೆ ಮಾಡಿಸಿ ಅಥವಾ ತೆರಿಗೆ ಮುಕ್ತ ಮಾಡಿ ಎಂದು ಬಸವರಾಜ್ ಕೇಳಿದರು.

ಈಗಾಗಲೇ ಖಾಸಗಿ ಬಸ್‌ಗಳಿಗೆ ಬರುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಖಾಸಗಿ ಬಸ್‌ಗಳಿವೆ. ಈಗ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದರಿಂದ ಖಾಸಗಿ ಬಸ್ ಗಳಿಗೆ ಬರುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಹೀಗಾಗಿ ಖಾಸಗಿ ಬಸ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು

error: Content is protected !!