ಬೆಂಗಳೂರು(ಜೂ.09): ‘ಪೊಲೀಸರು ಕುಂಕುಮ, ವಿಭೂತಿ ಇಡುವಂತಿಲ್ಲ ಎಂದು ನಾನು ಹೇಳಿಲ್ಲ. ಬೊಟ್ಟು ಯಾರು ಬೇಕಾದರೂ ಇಟ್ಟುಕೊಳ್ಳಬಹುದು. ಪೊಲೀಸರಿಗೆ ನಿಯಮಗಳ ಪ್ರಕಾರ ವಸ್ತ್ರ ಸಂಹಿತೆ ಇರುತ್ತದೆ. ಅದನ್ನು ಪಾಲಿಸಲಷ್ಟೇ ತಿಳಿಸಿದ್ದೇನೆ. ಈ ವಿಚಾರದಲ್ಲಿ ಅಪಪ್ರಚಾರ ಬೇಡ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ಅನಗತ್ಯ ವಿವಾದಗಳನ್ನು ಸೃಷ್ಟಿಮಾಡುವ ಅಗತ್ಯವಿಲ್ಲ. ನಾನು ಅಂತಹ ಯಾವುದೇ ಸೂಚನೆಯನ್ನು ನೀಡಿಲ್ಲ. ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಿದ್ದೇನೆ. ಬೊಟ್ಟು ಇಡಬೇಡಿ ಎಂದು ಯಾರಿಗೂ ಹೇಳಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಬೇಡ ಎಂದು ಸ್ಪಷ್ಟಪಡಿಸಿದರು.
ಕೋಮು ಪ್ರಚೋದನೆಗೆ ಕ್ರಮ:
ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೋಮುವಾದ ಒಂದು ಸಮುದಾಯಕ್ಕೆ ಸೀಮಿತವಲ್ಲ. ಯಾವುದೇ ಸಮುದಾಯದವರು ಕೋಮು ಪ್ರಚೋದನೆಗೆ ಯತ್ನಿಸಿದರೂ ಕ್ರಮ ಖಚಿತ ಎಂದು ಹೇಳಿದರು. ಎಲ್ಲಾ ಸಮುದಾಯದಲ್ಲೂ ಕೋಮುವಾದ ಇದೆ. ಕೋಮುವಾದ ತಡೆಗೆ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ವಿಂಗ್ ಮಾಡುತ್ತೇವೆ ಎಂದರು.
ಯಾರು ಕೋಮು ಪ್ರಚೋದನೆ ನೀಡುತ್ತಾರೋ ಅದನ್ನು ಅವರು ಗಮನಿಸುತ್ತಾರೆ. ವಿಶೇಷವಾಗಿ ಮಂಗಳೂರು ಭಾಗದಲ್ಲಿ ಮಾಡಬೇಕು ಎನ್ನುವ ಬೇಡಿಕೆ ಬಂದಿದೆ. ಅದಕ್ಕಾಗಿ ಅಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದ ಇತರೆಡೆಯೂ ಮಾಡುತ್ತೀರಾ ಎಂಬ ಪ್ರಶ್ನೆಗೆ, ಪ್ರಸ್ತುತ ಮಂಗಳೂರಿನಲ್ಲಿ ಬೇಡಿಕೆ ಬಂದಿರುವುದರಿಂದ ಅಲ್ಲಿ ಮಾಡಿದ್ದೇವೆ. ಬೇರೆ ಕಡೆ ಮಾಡುವ ಅಗತ್ಯತೆ ಬರುವುದಿಲ್ಲ ಎಂದು ತಿಳಿದುಕೊಂಡಿದ್ದೇನೆ ಎಂದರು.