ಗಂಗಾವತಿ :ನಗರದ ಕನಕಗಿರಿ ರಸ್ತೆಯಲ್ಲಿನ ತಮ್ಮ ನಿವಾಸದ ಕ್ರೀಯೆಟಿವ್ ಪಾರ್ಕ್ ಬಡಾವಣೆಯಲ್ಲಿ ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವ ಹಾಸ್ಟೇಲ್ ಕಾಮಗಾರಿಯನ್ನು ನಡೆಸದಂತೆ ಶಾಸಕ ಜನಾರ್ಧನರೆಡ್ಡಿ ಸೂಚನೆ ನೀಡಿದ್ದು, ನಗರದಲ್ಲಿ ಪರ್ಯಾಯ ಜಾಗ ಗುರುತಿಸಿ ಸ್ಥಳಾಂತರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ನಗರದ ತಾಪಂ ಮಂಥನ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಎಸ್‌ಟಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ನೀಡುತ್ತಿರುವಾಗ ಮಧ್ಯ ಪ್ರವೇಶಿಸಿದ ಶಾಸಕ ಜನಾರ್ಧನರೆಡ್ಡಿ ಕನಕಗಿರಿ ರಸ್ತೆಯ ಕ್ರಿಯೇಟಿವ್ ಪಾರ್ಕ್‌ನ ಬಡಾವಣೆಯಲ್ಲಿ ಎಸ್‌ಟಿ ಹಾಸ್ಟೆಲ್‌ಗಾಗಿ ಗುರುತಿಸಿರುವ ಜಾಗದ ಬಗ್ಗೆ ಬಡಾವಣೆ ನಿವಾಸಿಗಳು ತಕಾರಾರು ಮಾಡುತ್ತಿದ್ದಾರೆ. ಹೀಗಾಗಿ ಈ ಜಾಗದ ಬದಲಾಗಿ ಬೇರೆ ಜಾಗವನ್ನು ಗುರುತಿಸಿ ಎಂದು ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಎಸ್‌ಟಿ ಇಲಾಖೆ ಅಧಿಕಾರಿಗಳು ಈಗಾಗಲೇ ಕ್ರಿಯೇಟಿವ್ ಪಾರ್ಕ್ ಬಡಾವಣೆಯಲ್ಲಿ ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಹಾಸ್ಟೇಲ್ ನಿರ್ಮಿಸಲು 100*100 ಅಡಿಯ ನಿವೇಶನಕ್ಕೆ ಇಲಾಖೆಯಿಂದ ನಗರ ಪ್ರಾಧಿಕಾರಕ್ಕೆ ರೂ.30 ಲಕ್ಷ ಹಣ ಕಟ್ಟಲಾಗಿದೆ. ಮತ್ತು ಚುನಾವಣೆ ಪೂರ್ವದಲ್ಲಿ ಹಿಂದಿನ ಶಾಸಕರು ಭೂಮಿಪೂಜೆ ಮಾಡಿದ್ದಾರೆ. ಸ್ಥಳಾಂತರ ಕಷ್ಟ ಎಂದು ಸಬೂಬು ನೀಡಿದರು. ಆದರೆ ಶಾಸಕ ರೆಡ್ಡಿ ಇದಕ್ಕೆ ಒಪ್ಪದೇ ನಗರದಲ್ಲಿ ಪರ್ಯಾಯವಾಗಿ ಜಾಗ ಗುರುತಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಈಗಾಗಲೇ ಅವರಿಗೆ ಸಿಎ ಸೈಟ್ ಮಂಜೂರಾಗಿದೆ. ನಗರದಲ್ಲಿ ಪರ್ಯಾಯವಾಗಿ ಜಾಗ ಗುರುತಿಸುವುದು ಕಷ್ಟ. ಆದರೂ ಹೊಸ ಬಡಾವಣೆಯಲ್ಲಿ ನೋಡುತ್ತೇವೆ ಎಂದು ಪೌರಾಯುಕ್ತರು ಉತ್ತರಿಸಿದರು.
ತಮ್ಮ ನಿವಾಸದ ಬಡಾವಣೆಯಲ್ಲಿ ಎಸ್‌ಟಿ ಹಾಸ್ಟೇಲ್ ನಿರ್ಮಾಣಕ್ಕೆ ಶಾಸಕ ಜನಾರ್ಧನರೆಡ್ಡಿ ಅವರು ಹಿಂದೆಟು ಹಾಕುತ್ತಿದ್ದು, ಹಾಸ್ಟೆಲ್‌ನಿಂದ ತಮಗೆ ಸಮಸ್ಯೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿವಾಸಿಗಳ ಹೇಸರಿನಲ್ಲಿ ಶಾಸಕ ಜನಾರ್ಧರೆಡ್ಡಿ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ವಿಶೇಷ ಗಮನ ಸೇಳೆಯಿತು.