ಗಂಗಾವತಿ :ಜನ ಸಾಮಾನ್ಯದ ಕೆಲಸ ಕಾರ್ಯಗಳಿಗೆ ಅನವಶ್ಯಕ ತೊಂದರೆ ನೀಡದಂಡೆ ಮತ್ತು ಭ್ರಷ್ಟಾಚಾರ ನಡೆಸದಂತೆ ಆಡಳಿತ ನಡೆಸಬೇಕು ಎಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ನೇರವಾಗಿ ಸೂಚನೆ ನೀಡಿದ ಶಾಸಕ ಗಾಲಿ ಜನಾರ್ಧನರೆಡ್ಡಿ ಗಂಗಾವತಿಯಲ್ಲಿ ಇಸ್ಪಿಟ್, ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಇಂತಹ ಅಕ್ರಮಗಳನ್ನು ತಕ್ಷಣ ಹತ್ತಿಕ್ಕಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನೇರವಾಗಿ ವಾರ್ನಿಂಗ್ ನೀಡಿದರು.

ಮಂಗಳವಾರ ನಗರದ ತಾಪಂ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅನುಷ್ಟಾನಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ಅವರು ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಕೆಲಸ ಮಾಡಲು ನಾವು ಮತ್ತು ನೀವು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತಿದ್ದಾರೆ. ಹೀಗಾಗಿ ಸರಕಾರಿ ಕೆಲಸದ ಬಗ್ಗೆ ನಿರುತ್ಸಾಹ ತೋರುತ್ತಿದ್ದಾರೆ. ಇದನ್ನು ನೀವು ಅಲ್ಲಗಳೆಯಬೇಕು. ದೇವರು ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ಜನರ ಸೇವೆಯಲ್ಲಿ ಭ್ರಷ್ಟಾಚಾರ ತಲೆ ಎತ್ತಬಾರದು. ಭ್ರಷ್ಟಾಚಾರ ಕಂಡು ಬಂದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ನಂತರ ಇಲಾಖಾವಾರು ಪ್ರಗತಿ ಮಾಹಿತಿ ಪಡೆದರು.

ಆರೋಗ್ಯ ಇಲಾಖೆ, ಕೃಷಿ, ಶಿಕ್ಷಣ, ಲೋಕೋಪಯೋಗಿ, ಅಬಕಾರಿ, ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಎಸ್‌ಟಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಗಂಗಾವತಿ ಕ್ಷೇತ್ರದಲ್ಲಿ ಇದುವರೆಗೂ ಆಗಿರುವ ಪ್ರಗತಿಯ ಕುರಿತು ಮಾಹಿತಿ ಪಡೆದ ಶಾಸಕ ಜನಾರ್ಧನರೆಡ್ಡಿ ಅವರು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಜನರು ದೂರು ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿ ಕಳೆದ ಎರಡು ತಿಂಗಳಿಂದ ಸುಮಾರು ಅಕ್ರಮ ಮದ್ಯದ ವಿರುದ್ಧ 300ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಮಾತನಾಡಿ, ಕೇವಲ ಪ್ರಕರಣ ದಾಖಲಿಸಿದರೆ ಸಾಲದು ಪದೇ ಪದೇ ಅಕ್ರಮ ಮದ್ಯ ಮಾರಾಟ ನಡೆಸುವ ಸನ್ನದ್ದುದಾರರ ಲೈಸನ್ಸ್ ರದ್ದುಪಡಿಸಬೇಕು ಎಂದು ಸೂಚಿಸಿದರು.

ಹಿಂದುಳಿದ ವರ್ಗದ ತಾಲೂಕು ಅಧಿಕಾರಿ ಮುಜುಂದಾರ ಇಲಾಖೆ ಮಾಹಿತಿ ನೀಡುದರು  ಅಧಿಕಾರಿ ನಾನು ಇಲ್ಲಿಗೆ ಬಂದು ಎಂಟು ತಿಂಗಳಾಗಿದೆ. ಪೂರ್ಣ ಮಾಹಿತಿ ಇಲ್ಲ. ಮುಂದೆ ಎಲ್ಲವನ್ನು ತಮಗೆ ಮಾಹಿತಿ ನೀಡುತ್ತೇನೆ ಎಂದು ಮೌನಕ್ಕೆ ಜಾರಿದರು.

ಎಸ್‌ಟಿ ಇಲಾಖೆ ಅಧಿಕಾರಿಗಳು ಇಲಾಖೆಯಿಂದ ವಸತಿ ನಿಲಯಗಳ ನಿರ್ಮಾಣ ಕುರಿತು ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತ ಶಾಸಕ ಜನಾರ್ಧನರೆಡ್ಡಿ ಅವರು ಚುನಾವಣೆ ಪೂರ್ವದಲ್ಲಿ ನಾನು ವಾಸವಾಗಿರುವ ಬಡಾವಣೆಯಲ್ಲಿ ಎಸ್‌ಟಿ ಹಾಸ್ಟೇಲ್ ನಿರ್ಮಿಸಲು ಭೂಮಿಪೂಜೆ ಮಾಡಿದ್ದೀರಿ. ಆದರೆ ಬಡಾವಣೆ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತಿದ್ದು, ಪರ್ಯಾಯ ಜಾಗ ಗುರುತಿಸಿ ಎಂದು ಸೂಚಿಸಿದರು. ಆದರೆ ಇದಕ್ಕೆ ಇಲಾಖೆಯಿಂದ ಹಣ ತುಂಬಿದ್ದು, ನಗರದಲ್ಲಿ ಸಿಎ ಸೈಟ್ ಸಿಗುವುದು ಕಷ್ಟ ಎಂದರು. ಪರ್ಯಾಯವಾಗಿ ನಗರದಲ್ಲಿ ಎಸ್‌ಟಿ ಹಾಸ್ಟೆಲ್ ನಿರ್ಮಿಸಲು ನಿವೇಶನ ಒದಗಿಸಿಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ಎಇಇ ಸುದೇಶಕುಮಾರ ಇಲಾಖೆಯ ಪ್ರಗತಿ ನೀಡುತ್ತಿದ್ದಂತೆ ಅಂಜನಾದ್ರಿ ಪರ್ವತದ ರಸ್ತೆ ಕಾಮಗಾರಿ ಕುರಿತು ಮಾಹಿತಿ ಕೆದಕಿದರು. ಇದಕ್ಕೆ ಉತ್ತರಿಸಿದ ಎಇಇ ಹಿಟ್ನಾಳ ಕ್ರಾಸ್‌ನಿಂದ ಮರಳಿ ಟೋಲ್‌ವರೆಗೆ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅವರೇ ಅದರ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ನರೇಗಾ ಯೋಜನೆಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲು

ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡುತ್ತಿದ್ದಂತೆ ಮದ್ಯ ಪ್ರವೇಶಿಸಿದ ಲೋಕೋಪಯೋಗಿ ಇಲಾಖೆ ಎಇಇ ಸುದೇಶ ಅವರು ರಸ್ತೆ ಬಿಟ್ಟು ಕನಿಷ್ಟ 25 ಅಡಿ ದೂರ ಗಿಡಗಳನ್ನು ನೆಡಲು ಸೂಚನೆ ನೀಡಬೇಕು. ಇಲ್ಲದಿದ್ದರೆ ರಸ್ತೆ ಅಗಲೀಕರಣದಲ್ಲಿ ಮರಗಳನ್ನು ಕಡಿಯಬೇಕಾಗುತ್ತದೆ. ಅರಣ್ಯ ಇಲಾಖೆಯವರು ರಸ್ತೆಗೆ ಹೊಂದಿಕೊಂಡು ಗಿಡ ನೆಡುತ್ತಿದ್ದಾರೆ ಎಂದು ಶಾಸಕರಿಗೆ ದೂರು ನೀಡಿದರು. ಇದನ್ನು ಪರಿಶೀಲಿಸಿ ರಸ್ತೆಯಿಂದ ಅಂತರ ಕಾಯ್ದುಕೊಂಡು ಗಿಡಗಳನ್ನು ನೆಡುವಂತೆ ಶಾಸಕ ರೆಡ್ಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಕನಕದಾಸ ವೃತ್ತದಿಂದ ಜುಲೈನಗರ ವೃತ್ತದವರೆಗಿನ ರಸ್ತೆ ನಮಗೆ ಹಸ್ತಾಂತರವಾಗಿಲ್ಲ. ಅದರ ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಇದೆ ಎಂದು ಪೌರಾಯುಕ್ತ ವಿರುಪಾಕ್ಷಮೂರ್ತಿ ಹೇಳಿದರು. ಇದಕ್ಕೆ ಉತ್ತರಿಸಿದ ಪಿಡಬ್ಲೂಡಿ ಎಇಇ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ನಗರಸಭೆ ನಿರ್ವಹಣೆಯಲ್ಲಿ ಇದೆ ಎಂದರು. ಇಬ್ಬರು ಅಧಿಕಾರಿಗಳ ನಡುವೆ ಈ ಕುರಿತು ವಾಗ್ವಾದ ನಡೆಯಿತು. ಅದೇ ರೀತಿ ಕನಕಗಿರಿ ಮತ್ತು ಕೊಪ್ಪಳ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿ ಲೋಪಗಳಾಗುತ್ತಿದ್ದು, ಇಲಾಖೆ ಅಧಿಕಾರಿಗಳು ಗಮನಿಸಬೇಕು ಎಂದು ಪೌರಾಯುಕ್ತರು ರಸ್ತೆ ಪ್ರಾಧಿಕಾರಿದ ಅಭಿಯಂತರಿಗೆ ಸೂಚನೆ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ರೆಡ್ಡಿ ತಕ್ಷಣ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮದ್ಯಾಹ್ನದವರೆಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕ ಜನಾರ್ಧನರೆಡ್ಡಿ ಎಲ್ಲವನ್ನು ಶಾಂತ ಚಿತ್ತದಿಂದ ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಭೆಯಲ್ಲಿ ಗಂಗಾವತಿ ತಹಶೀಲ್ದಾರ ಮಂಜುನಾಥ, ತಾಪಂ ಇಓ ಮಹಾಂತಗೌಡ ಪಾಟೀಲ್, ಕೊಪ್ಪಳ ತಹಶೀಲ್ದಾರ, ಕೊಪ್ಪಳ ತಾಪಂ ಇಓ, ಪೌರಾಯುಕ್ತ ವಿರುಪಾಕ್ಷಮೂರ್ತಿ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಮತ್ತಿತರು ಇದ್ದರು.

error: Content is protected !!