ಮೇ 28ರಂದು ಹೊಸ ಸಂಸತ್ ಕಟ್ಟಡ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ನೂತನ ಸಂಸತ್ ಕಟ್ಟಡ ಉದ್ಘಾಟನೆಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಂಸತ್ ಕಟ್ಟಡದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಅವರು, “ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರಲಿದೆ. ಈ ವೀಡಿಯೊ ಸಂಸತ್ ಭವನ ಹೇಗಿರಲಿದೆ ಎನ್ನುವ ಒಂದು ಅಂದಾಜನ್ನು ನೀಡುತ್ತದೆ.” ಎಂದು ಹೇಳಿದ್ದಾರೆ.

ಆಫರ್ ಕೊಟ್ಟ ಪ್ರಧಾನಿ ಮೋದಿ

ಇನ್ನು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ದೇಶದ ನಿವಾಸಿಗಳಿಗೆ ವಿಶೇಷ ಆಫರ್ ಕೊಟ್ಟಿದ್ದಾರೆ. “ಸಂಸತ್ ಭವನದ ವಿಡಿಯೋವನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅಂತಹ ಕೆಲವು ಟ್ವೀಟ್‌ಗಳನ್ನು ನಾನು ರಿ ಟ್ವೀಟ್‌ ಮಾಡುತ್ತೇನೆ” ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಹಂಚಿಕೊಂಡಿರುವ ವಿಡಿಯೋ ಈಗಾಗಲೇ 4.60 ಲಕ್ಷ ವೀಕ್ಷಣೆಗಳನ್ನು ಕಂಡಿದೆ. 10 ಸಾವಿರ ಬಾರಿ ರಿಟ್ವೀಟ್ ಆಗಿದೆ. 30 ಸಾವಿರಕ್ಕಿಂತ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ. ಪ್ರಧಾನಿ ಮೋದಿ ಮಾತ್ರವಲ್ಲದೆ ಬಿಜಪಿ ನಾಯಕರು ಕೂಡ ಈ ವಿಡಿಯೋ ಹಂಚಿಕೊಂಡಿದ್ದಾರೆ.

ವಿವಾದದ ನಡುವೆಯೇ ಉದ್ಘಾಟನೆ

ಇನ್ನು ನೂತನ ಸಂಸತ್ ಕಟ್ಟಡ ಉದ್ಘಾಟನೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ನೂತನ ಸಂಸತ್ ಕಟ್ಟಡವನ್ನು ನಿಯಮದ ಪ್ರಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಬೇಕಿತ್ತು, ಆದರೆ ಮೋದಿ ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಾವೇ ಉದ್ಘಾಟನೆ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಆರೋಪ ಮಾಡಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿವೆ.

ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. ಇದರೊಂದಿಗೆ ಕಾನೂನು ತೊಡಕು ಕೂಡ ತಪ್ಪಿದಂತಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೇ ಮೋದಿಯವರನ್ನು ಭೇಟಿ ಮಾಡಿ ಹೊಸ ಸಂಸತ್ ಭವನ ಉದ್ಘಾಟಿಸುವಂತೆ ಆಹ್ವಾನ ನೀಡಿದ್ದರು.

972 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ

ಹೊಸ ಸಂಸತ್ ಭವನ ನಿರ್ಮಾಣಕ್ಕೆ 970 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. 65,000 ಚದರ ಮೀಟರ್‌ಗಳಲ್ಲಿ ಕಟ್ಟಡ ಹರಡಿಕೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯನಿರ್ವಹಣೆಗಾಗಿ ಎರಡು ದೊಡ್ಡ ಸಭಾಂಗಣಗಳನ್ನು ನಿರ್ಮಿಸಲಾಗಿದೆ. 888 ಆಸನ ಸಾಮರ್ಥ್ಯ ಹೊಂದಿರುವ ಲೋಕಸಭೆಯು ನವಿಲು-ಮಾದರಿಯ ವಿನ್ಯಾಸ ಹೊಂದಿದೆ. 384 ಆಸನಗಳ ರಾಜ್ಯಸಭಾ ಸಭಾಂಗಣವು ಕಮಲದ ಮಾದರಿಯನ್ನು ಹೊಂದಿದೆ.

ಉಭಯ ಸದನಗಳ ಜಂಟಿ ಅಧಿವೇಶನದ ಸಂದರ್ಭದಲ್ಲಿ, ಲೋಕಸಭೆಯ ಕೊಠಡಿಯಲ್ಲಿ ಒಟ್ಟು 1,280 ಸದಸ್ಯರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಶಾಸಕರಿಗೆ ಕಚೇರಿಗಳು ಮತ್ತು ಸಭೆಗಳಿಗೆ ಸಮಿತಿ ಕೊಠಡಿಗಳು, ಒಂದು ಗ್ರಂಥಾಲಯ ಹೊರತಾಗಿ ಅತ್ಯಾಧುನಿಕ ಸಂವಿಧಾನವ ಭವನವನ್ನು ಹೊಂದಿದೆ.

error: Content is protected !!