ದಾಳಿ ನಡೆಸಲು ಹೋಗಿದ್ದ ಐಟಿ ಅಧಿಕಾರಿಗಳ ಜೊತೆ ಡಿಎಂಕೆ ಕಾರ್ಯಕರ್ತರು ಕಿರಿಕ್ ಮಾಡಿದ್ದಲ್ಲದೆ, ಹಲ್ಲೆ ಮಾಡಲು ಯತ್ನಿಸಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ. 200ಕ್ಕೂ ಅಧಿಕ ಡಿಎಂಕೆ ಕಾರ್ಯಕರ್ತರು ಐಟಿ ಅಧಿಕಾರಿಗಳನ್ನು ತಳ್ಳಾಡಿದ್ದಲ್ಲ, ಕಾರನ್ನು ಜಖಂಗೊಳಿಸಿದ್ದಾರೆ.

ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವರಾದ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಚೆನ್ನೈ, ಕರೂರ್ ಮತ್ತು ಕೊಯಮತ್ತೂರು ಜಿಲ್ಲೆಗಳ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಶುಕ್ರವಾರ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ನಕಲಿ ಮದ್ಯ ಸೇವನೆಯಿಂದ ಹಲವರು ಮೃತಪಟ್ಟ ಬಳಿಕ ಸಚಿವರ ವಿರುದ್ಧ ಭಾರಿ ಟೀಕೆಗಳು ಕೇಳಿಬಂದಿದ್ದವು. ಉದ್ಯೋಗ ಕೊಡಿಸಲು ಅವರು ಲಂಚ ಪಡೆದುಕೊಂಡಿದ್ದಾರೆ ಎನ್ನುವ ಹಗರಣದಲ್ಲಿ ಅವರ ವಿರುದ್ಧ ವಿಚಾರಣೆ ಮುಂದುವರೆಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಪ್ರತಿಪಕ್ಷಗಳು ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿವೆ.

ಸೆಂಥಿಲ್ ಬಾಲಾಜಿ ಅವರ ಮನೆ ಮತ್ತು ಕಚೇರಿ ಮಾತ್ರವಲ್ಲದೆ ಕರೂರಿನಲ್ಲಿರುವ ಅವರ ಸಹೋದರ ಅಶೋಕ್ ಅವರ ಆಸ್ತಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಶೋಧ ಕಾರ್ಯದ ಭಾಗವಾಗಿ ಕರೂರಿನ ರಾಮಕೃಷ್ಣಪುರಂನಲ್ಲಿರುವ ಅಶೋಕ್ ಅವರ ಮನೆಗೆ ಐಟಿ ಅಧಿಕಾರಿಗಳು ಆಗಮಿಸಿದ್ದರು. ಆದರೆ, ಮನೆಗೆ ಬೀಗ ಹಾಕಿದ್ದರಿಂದ ಅಧಿಕಾರಿಗಳು ಹೊರಗೆ ಕಾಯುತ್ತಿದ್ದರು.

ಈ ಸಮಯದಲ್ಲಿ, ಕರೂರ್ ಕಾರ್ಪೋರೇಷನ್ ಮೇಯರ್ ಡಿಎಂಕೆಯ ಕವಿತಾ ಗಣೇಶನ್ ಸೇರಿದಂತೆ 200 ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಐಟಿ ಅಧಿಕಾರಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಐಟಿ ಅಧಿಕಾರಿಗಳಿಗೆ ಗುರುತಿನ ಚೀಟಿ ತೋರಿಸುವಂತೆ ಒತ್ತಡ ಹಾಕಿದ್ದಾರೆ, ಆದರೆ ಅಧಿಕಾರಿಗಳು ಐಡಿ ಕಾರ್ಡ್ ತೋರಿಸಲು ನಿರಾಕರಿಸಿದ ನಂತರ ಸ್ಥಳದಲ್ಲಿ ಗಲಾಟೆ ಶುರುವಾಗಿದೆ.

ಐಟಿ ಅಧಿಕಾರಿಗಳನ್ನು ಸುತ್ತುವರೆದ ಡಿಎಂಕೆ ಕಾರ್ಯಕರ್ತರು, ಅಧಿಕಾರಿಗಳ ಕಾರಿನ ವಿಂಡ್‌ಶೀಲ್ಡ್ ಮತ್ತು ಹಿಂಬದಿಯ ಕನ್ನಡಿಗಳಲ್ಲಿ ಒಂದನ್ನು ಒಡೆದಿದ್ದಾರೆ. ಇದರಿಂದಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕರೂರಿನ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಏಪ್ರಿಲ್ 2, 2021 ರಂದು ನಡೆದ ದಾಳಿಯ ನಂತರ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರನ ಆಸ್ತಿಗಳ ಮೇಲೆ ಇದು ಎರಡನೇ ಐಟಿ ದಾಳಿಯಾಗಿದೆ.

error: Content is protected !!