ಕೆಜಿಎಫ್ (ಕೋಲಾರ): ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿ ಹೆಸರು ನೋಂದಾಯಿಸಲು ಗುರುವಾರ ಮುಂಜಾನೆ ನೂರಾರು ಮಹಿಳೆಯರು ನಗರದ ಸೈಬರ್ ಸೆಂಟರ್‌ಗಳಿಗೆ ಮುಗಿಬಿದ್ದಿದ್ದರು.
ಪಡಿತರ ಚೀಟಿಗೆ ಮೇ 31ರ ಒಳಗಾಗಿ ಆಧಾರ್ ಜೋಡಣೆ ಮಾಡಿ ಹೆಸರು ನೋಂದಾಯಿಸಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಸಿಗುತ್ತದೆ ಎಂಬ ಸುಳ್ಳು ಸಂದೇಶ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನು ನಂಬಿದ ಮಹಿಳೆಯರು ಮುಂಜಾನೆಯಿಂದಲೂ ಎಲ್ಲ ದಾಖಲೆಗಳೊಂದಿಗೆ ಸೈಬರ್ ಸೆಂಟರ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ನಗರದ ಬಹುತೇಕ ಸೈಬರ್ ಸೆಂಟರ್‌ಗಳು ಮಹಿಳೆಯರಿಂದ ತುಂಬಿದ್ದವು. ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಲು ಬಂದಿರುವುದಾಗಿ ಅವರು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿ ಪ್ರತಿ ತಿಂಗಳು ₹2,000 ಪಡೆಯಲು ಆಧಾರ್ ಜೋಡಣೆ ಮಾಡಿರಬೇಕು. ಮನೆಯ ಯಜಮಾನಿ ಹೆಸರಿನಲ್ಲಿ ಪಡಿತರ ಚೀಟಿ ಇರಬೇಕು. ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು ಮತ್ತು ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು ಎಂದು ವಾಟ್ಸ್‌ಆಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶವನ್ನು ಮಹಿಳೆಯರು ತೋರಿಸಿದರು. ಈ ಸಂದೇಶದ ಕೆಳಗೆ ಸೈಬರ್ ಸೆಂಟರ್ ಹೆಸರು, ಸಂಪರ್ಕ ಸಂಖ್ಯೆಯನ್ನೂ ಮುದ್ರಿಸಲಾಗಿದೆ.
‘ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಲು ಮೇ 31 ಕಡೆ ದಿನ ಎಂದು ಹೇಳಿದ ಕಾರಣ ಬ್ಯಾಂಕ್ ಖಾತೆಗೆ ಪಡಿತರ ಚೀಟಿ, ಆಧಾರ್ ಲಿಂಕ್ ಮಾಡಿಸಲು ಬಂದಿದ್ದೇವೆ’ ಎಂದು ಸರದಿಯಲ್ಲಿ ನಿಂತಿದ್ದ ಮಹಿಳೆಯರು ತಾವು ತಂದಿದ್ದ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ತೋರಿಸಿದರು.
ಪಡಿತರ ಚೀಟಿಗೆ ಆಧಾರ್ ಜೋಡಣೆಗೆ ಸೈಬರ್ ಸೆಂಟರ್‌ನವರು ₹250 ಹಣ ಪಡೆಯುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಆಧಾರ್ ಲಿಂಕ್ ಮಾಡಲು ₹40 ರಿಂದ ₹50 ಶುಲ್ಕ ಪಡೆಯುತ್ತಾರೆ. ನಗರದಲ್ಲಿ 23 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ದಾರರಿದ್ದು, 800 ಅಂತ್ಯೋದಯ ಮತ್ತು 760 ಎಪಿಎಲ್ ಕಾರ್ಡ್‌ದಾರರಿದ್ದಾರೆ.
‘ಸರ್ಕಾರದಿಂದ ಇದುವರೆಗೂ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು ಹಣ ಬಿಡುಗಡೆಗೆ ಮಾರ್ಗಸೂಚಿ ಕೂಡ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಒಪ್ಪಿಗೆ ದೊರೆತ ಬಳಿಕ ಮಾರ್ಗಸೂಚಿ ಬಿಡುಗಡೆಗೆ ಸಮಯಾವಕಾಶ ಬೇಕಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಗೃಹಲಕ್ಷ್ಮಿ ಯೋಜನೆ ಅಡಿ ಹೆಸರು ನೋಂದಾಯಿಸಲು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವುದಾಗಿ ಹೇಳಿ ಸೈಬರ್ ಸೆಂಟರ್‌ಗಳಲ್ಲಿ ಮಹಿಳೆಯರಿಂದ ಹಣ ವಸೂಲಿ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕರು ನಗರದ ಆರು ಸೈಬರ್ ಸೆಂಟರ್‌ಗಳಿಗೆ ತೆರಳಿ ಪರಿಶೀಲಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ‘ಕಾಲಚಕ್ರ ಗೆ ತಿಳಿಸಿದ್ದಾರೆ.