ಕುಷ್ಟಗಿ: ಬೇಸಿಗೆ ಕಳೆದು ಇನ್ನೇನು ಪ್ರಸಕ್ತ ವರ್ಷದ ಮುಂಗಾರು ಹಬ್ಬ ಆರಂಭಗೊಳ್ಳುವ ಸಮಯ. ಕಳೆದ ವರ್ಷದ ಕೃಷಿ ಬದುಕಿನ ಸಿಹಿ ಕಹಿಗಳನ್ನು ಮರೆತು ಜಿಲ್ಲೆಯ ರೈತರು ಮತ್ತೆ ಭವಿಷ್ಯದ ಕೃಷಿ ಚಟುವಟಿಕೆಗೆ ಸಜ್ಜಾಗಿದ್ದು ಮಳೆರಾಯನ ನಿರೀಕ್ಷೆಯಲ್ಲಿದ್ದಾರೆ.

ಬಿತ್ತನೆಪೂರ್ವ ಚಟುವಟಿಕೆಗಳು ಪೂರ್ಣಗೊಂಡಿದ್ದು ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಹೊಲಗದ್ದೆಗಳು ತಯಾರಾಗಿವೆ, ರೈತರಿಗೆ ಬಿತ್ತನೆ, ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳೊಂದಿಗೆ ನೆರವು ಒದಗಿಸಲು ಕೃಷಿ ಇಲಾಖೆಯೂ ಸನ್ನದ್ಧವಾಗಿದೆ.

ಇಷ್ಟೆಲ್ಲ ಸಿದ್ಧತೆಯಾಗಿದ್ದರೂ ಸದ್ಯ ಮಳೆರಾಯನ ಸುಳಿವಿಲ್ಲ. ಜಿಲ್ಲೆಯ ಕೆಲವೆಡೆ ಅಶ್ವಿನಿ ಮಳೆ ಬಂದರೆ ಇನ್ನೂ ಬಹುತೇಕ ಕಡೆಗಳಲ್ಲಿ ಭರಣಿ ಮಳೆ ಬಂದು ಬಿತ್ತನೆ ಪೂರ್ವದಲ್ಲಿ ಹೊಲಗಳನ್ನು ರಂಟೆ, ಕುಂಟೆ ಹೊಡೆದು ಹದಗೊಳಿಸುವುದಕ್ಕೆ ಅನುಕೂಲವಾಗಿತ್ತು. ಮಳೆ ನಕ್ಷತ್ರಗಳ ಪ್ರಕಾರ ಈಗ ಕೃತ್ತಿಕಾ ಒಂದು ಪಾದ ಮುಗಿದಿದ್ದು ಇನ್ನೂ ಕೆಲವು ದಿನಗಳಲ್ಲಿ ಅವಧಿ ಮುಗಿಯಲಿದೆ.

ಈ ಬಾರಿಯ ಮುಂಗಾರು ಹಂಗಾಮಿನ ಬಗ್ಗೆ ಬಹಳಷ್ಟು ಆಶಾಭಾವನೆ ಹೊಂದಿ ಬಿತ್ತನೆಗೆ ತಯಾರು ಮಾಡಿಕೊಂಡಿರುವ ರೈತರಿಗೆ ಮಳೆಯ ಕಾತರ ಹೆಚ್ಚಾಗಿ ಆಕಾಶದತ್ತ ಮುಖಮಾಡಿದ್ದಾರೆ. ಜೂನ್‌ ಮೊದಲ ವಾರದಿಂದ ಮುಂಗಾರು ಮಾರುತಗಳು ಈ ಪ್ರದೇಶಕ್ಕೆ ಬರುವ ಸಾಧ್ಯತೆ ಇದೆ ಎಂದೆ ಕೃಷಿ ಇಲಾಖೆ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಬಹುತೇಕ ಎರೆ ಜಮೀನು ಹಾಗೂ ಒಂದಷ್ಟು ಮಸಾರಿ ಪ್ರದೇಶದಲ್ಲಿ ರೈತರು ಅಲ್ಪಾವಧಿ ತಳಿ ಹೆಸರು ಇಡಿಯಾಗಿ ಅಥವಾ ಒಂದು ಸಾಲಿನ ತೊಗರಿ ಮಿಶ್ರಬೆಳೆಯೊಂದಿಗೆ ಬಿತ್ತನೆ ಕೈಗೊಳ್ಳುವುದು ವಾಡಿಕೆ. ಭರಣಿ ಮಳೆ ಅಂತ್ಯ ಹಾಗೂ ರೋಹಿಣಿ ಮಳೆ ಒಳಗೆ ಅಂದರೆ ಈ ತಿಂಗಳ ಅಂತ್ಯದೊಳಗೆ ಹೆಸರು ಬೆಳೆ ಬಿತ್ತನೆ ಮುಗಿದು ನಾಟಿಗೆ ಹೊರಬಂದಿರಬೇಕು. ಕೃತ್ತಿಕಾ ಮಳೆ ಕೈಕೊಟ್ಟಿದ್ದು ಹೆಸರು ಬಿತ್ತನೆ ಈ ಬಾರಿ ಅನುಮಾನ ಎನ್ನುತ್ತಾರೆ ತೆಗ್ಗಿಹಾಳದ ರೈತ ನಡುಗಡ್ಡೆಪ್ಪ ಜಗ್ಗಲ. ಎಳ್ಳು ಬಿತ್ತುವುದಕ್ಕೆ ಇನ್ನೂ ಅವಕಾಶವಿದೆ. ರೈತರಿಗೆ ಉತ್ತಮ ಆದಾಯ ತರುವ ಹೆಸರು ಎರೆ ಜಮೀನಿನಲ್ಲಿ ಬಿತ್ತನೆಯಾಗಿದ್ದರೆ ನಂತರ ಸಜ್ಜೆ, ಈರುಳ್ಳಿ, ಸೂರ್ಯಕಾಂತಿ ಬಿತ್ತನೆ ನಡೆಸಿ ನಂತರ ಹಿಂಗಾರು ಬೆಳೆ ಬಿತ್ತನೆ ಮಾಡಲೂ ಸಾಧ್ಯವಾಗುತ್ತಿತ್ತು ಎಂಬುದು ಇತರೆ ರೈತರ ಲೆಕ್ಕಾಚಾರ.

ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆಬೀಜ, ರಸಗೊಬ್ಬರ ಇತರೆ ಪರಿಕರಗಳ ದಾಸ್ತಾನು ಆರಂಭಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ ಬಿತ್ತನೆ ಕ್ಷೇತ್ರದ ಪೈಕಿ ಒಟ್ಟು 3.08 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಅದರಲ್ಲಿ ರೈತರ ಆಸಕ್ತಿಯಂತೆ ಏಕದಳ ಬೆಳೆ ಮೆಕ್ಕೆಜೋಳದ ಕ್ಷೇತ್ರ ಮೊದಲ ಸ್ಥಾನ (99.90 ಸಾವಿರ ಹೆಕ್ಟರ್)ದಲ್ಲಿ ಬಿತ್ತನೆಯಾಗುವ ಗುರಿ ಇದೆ. ನಂತರದ ಸ್ಥಾನ ಹೈಬ್ರೀಡ್‌ ಸಜ್ಜೆ (64.37 ಸಾವಿರ ಹೆಕ್ಟರ್) ಬಿತ್ತನೆ ಗುರಿ ಇದೆ. 38.86 ಸಾವಿರ ಹೆಕ್ಟರ್‌ ದ್ವಿದಳಧಾನ್ಯ ಬಿತ್ತನೆ ಗುರಿ ಇದ್ದು ಅದರಲ್ಲಿ 18.71 ಸಾವಿರ ಹೆಕ್ಟರ್ ತೊಗರಿ, 15.41 ಸಾವಿರ ಹೆಕ್ಟರ್ ಹೆಸರು ಬಿತ್ತನೆಯಾಗುವ ಸಾಧ್ಯತೆ ಇದೆ. ಎಣ್ಣೆಕಾಳು ಬೆಳೆಗಳ ಪೈಕಿ 10.65 ಸಾವಿರ ಹೆಕ್ಟರ್‌ದಲ್ಲಿ ಶೇಂಗಾ, 8831 ಹೆಕ್ಟರ್‌ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಲಾಗಿದೆ. ಅದೇ ರೀತಿ ವಾಣಿಜ್ಯ ಬೆಳೆಗಳ ಪೈಕಿ 11.56 ಸಾವಿರ ಹೆಕ್ಟರ್‌ದಲ್ಲಿ ಹತ್ತಿಯ ಪಾಲು ಇರಲಿದೆ ಎಂಬುದು ಕೃಷಿ ಇಲಾಖೆ ಮಾಹಿತಿ.

ಬೀಜ ಮತ್ತು ರಸಗೊಬ್ಬರಗಳ ವಿತರಣೆಗೆ ಜಿಲ್ಲೆಯಾದ್ಯಂತ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಮುಂಗಾರು ಹಂಗಾಮಿನ (ಜುಲೈ ಅಂತ್ಯದವರೆಗೆ) ಅಂದಾಜಿನ ಪ್ರಕಾರ ಯೂರಿಯಾಕ್ಕೆ (13 ಸಾವಿರ ಟನ್) ಹೆಚ್ಚಿನ ಬೇಡಿಕೆ ಇದ್ದು ಸುಮಾರು 3000 ಟನ್‌ ಡಿಎಪಿ ಮತ್ತು 9123 ಟನ್‌ ಸಂಯುಕ್ತ ರಸಗೊಬ್ಬರ (ಕಾಂಪ್ಲೆಕ್ಸ್) ಗೊಬ್ಬರಗಳನ್ನು ಬೇಡಿಕೆ ಇದ್ದು ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿರುವ 20 ರೈತ ಸಂಪರ್ಕ ಕೇಂದ್ರಗಳ ಜೊತೆಗೆ

8 ಹೆಚ್ಚುವರಿ ಕೇಂದ್ರಗಳ ಮೂಲಕ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಸಹಕಾರ ಸಂಘಗಳು ಹಾಗೂ ಖಾಸಗಿ ಡೀಲರ್‌ಗಳ ಬಳಿ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.

ಮುಂಗಾರು ಪೂರ್ವ ಮಳೆಗೆ ಹಿನ್ನಡೆಯಾಗಿದೆ ಜೂನ್‌ ಮೊದಲವಾರದಲ್ಲಿ ಮುಂಗಾರು ಪ್ರವೇಶವಾಗಲಿದ್ದು ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಬೀಜ ಗೊಬ್ಬರ ವಿತರಣೆಗೆ ಇಲಾಖೆ ಸಿದ್ಧವಾಗಿದೆ ರುದ್ರೇಶಪ್ಪ ಜಂಟಿ ನಿರ್ದೇಶಕ ಕೃಷಿ ಇಲಾಖೆ

error: Content is protected !!