
ಬೆಂಗಳೂರು , ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಘೋಷಣೆಯಾಗಿದೆ. ಆದರೆ ಬೆಂಗಳೂರು ನಗರದ ಜಯನಗರದಲ್ಲಿ ಗೆದ್ದವರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದ್ದು, 3ನೇ ಬಾರಿಗೆ ಮರು ಎಣಿಕೆ ನಡೆಯುತ್ತಿದೆ.
ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ 57591 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಯ ಸಿ. ಕೆ. ರಾಮಮೂರ್ತಿ 57297 ಮತಗಳನ್ನು ಪಡೆದಿದ್ದಾರೆ. ಸಿ. ಕೆ. ರಾಮಮೂರ್ತಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಕಾರಣ ಮರು ಎಣಿಕೆಗೆ ಮೊದಲ ಬಾರಿಗೆ ಮನವಿ ಮಾಡಲಾಯಿತು.
ಮತ ಎಣಿಕೆಯಲ್ಲಿ ಸೌಮ್ಯಾ ರೆಡ್ಡಿ ಗೆಲುವಿನ ಅಂತರ ಕಡಿಮೆ ಆಯಿತು. ಆದ್ದರಿಂದ ಮತ್ತೊಮ್ಮೆ ಮರು ಎಣಿಕೆಗೆ ಮನವಿ ಮಾಡಲಾಯಿತು. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆಗ ಬಿಜೆಪಿಯ ಕಾರ್ಯಕರ್ತರು ಪ್ರತಿಭಟಿಸಿದರು. ಜಟಾಪಟಿ ನಡೆಯಿತು.
2ನೇ ಬಾರಿಯ ಮರು ಎಣಿಕೆಯಲ್ಲಿ ಸೌಮ್ಯಾ ರೆಡ್ಡಿ 119 ಮತಗಳ ಅಂತರದಲ್ಲಿ ಗೆದ್ದರು. ಆದರೆ ಸೋಲುಕಂಡ ಸಿ. ಕೆ. ರಾಮಮೂರ್ತಿ ಮತ್ತೆ ಮರು ಎಣಿಕೆಗೆ ಮನವಿ ಮಾಡಿದರು. ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದರೂ ಸಹ ಮತ್ತೊಮ್ಮೆ ಮರು ಎಣಿಕೆಗೆ ಒಪ್ಪಿಗೆ ನೀಡಲಾಯಿತು.
ಮೂರನೇ ಬಾರಿಗೆ ಮತ ಎಣಿಕೆ ಮಾಡಿದಾಗ ಸಿ. ಕೆ. ರಾಮಮೂರ್ತಿಗೆ 17 ಮತಗಳ ಮುನ್ನಡೆ ಸಿಕ್ಕಿದೆ. ಆದ್ದರಿಂದ ಮತ್ತೆ ಸೌಮ್ಯಾ ರೆಡ್ಡಿ ಮತ್ತೆ ಮರು ಎಣಿಕೆಗೆ ಮನವಿ ಮಾಡಿದ್ದಾರೆ.
ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸಂಸದ ತೇಜಸ್ವಿಸೂರ್ಯ ಅವರು ಮತ ಎಣಿಕೆ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯರ್ತರು ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಎರಡೂ ಪಕ್ಷಗಳ ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ. ಆದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಗುಂಪು ಚದುರಿಸಲು ಪ್ರಯತ್ನ ನಡೆಸುತ್ತಿದ್ದಾರೆ.