
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತಿದ್ದಂತ ಬಿಜೆಪಿಯಿಂದ, ಸಾಲು ಸಾಲು ಕೇಂದ್ರದ ನಾಯಕರು ಸೇರಿದಂತೆ ಸ್ಟಾರ್ ಕ್ಯಾಂಪೆನ್ ಅನ್ನು ಈ ಬಾರಿಯ ಚುನಾವಣೆಯ ಪ್ರಚಾರದಲ್ಲಿ ನಡೆಸಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ವರ್ಕ್ ಔಟ್ ಆಗಿತ್ತು.
ಅದೇ ರೀತಿ 2023ರಲ್ಲಿಯೂ ಆಗಲಿದೆ ಎಂಬುದಾಗಿ ಯೋಚನೆಯಲ್ಲಿದ್ದಂತ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರಿಂದ ಒಂದು ವಾರಗಳ ಕಾಲ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಾಗಿತ್ತು. ಆದ್ರೇ ಈ ಬಾರಿ ಮೋದಿ ಮ್ಯಾಜಿಕ್ ವರ್ಕೌಟ್ ಆಗಿಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ಫಿಕ್ಸ್ ಆದಂತೆ ಆಗಿದೆ.
ಬಾಂಬೆ ಟೀಂಗೆ ಶಾಕ್ ಕೊಟ್ಟ ಮತದಾರ
ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೇಳೆಯಲ್ಲಿ ಸರ್ಕಾರ ಕೆಡವಲು ಬಾಂಬೆ ಟೀಂ ಕಾರಣವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದ 17 ಶಾಸಕರು, ಮುಂಬೈ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿ, ಸಮ್ಮಿಶ್ರ ಸರ್ಕಾರ ಪಥನವಾಗುವಂತೆ ಮಾಡಲಾಗಿತ್ತು. ಈ ಟೀಂನಲ್ಲಿ ರಮೇಶ್ ಜಾರಕಿಹೊಳಿ, ಡಾ.ಕೆ ಸುಧಾಕರ್, ಎಸ್ ಟಿ ಸೋಮಶೇಖರ್, ಮುನಿರತ್ನ, ಕೆ.ಸಿ ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ ಪಾಟೀಲ್, ಆನಂದ್ ಸಿಂಗ್, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಇದ್ದರು.
ಬಾಂಬೆ ಟೀಂನ ಅನೇಕರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಗ್ ಶಾಕ್ ಅನ್ನು ಮತದಾರರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಗೆಲುವು ಕಂಡಿದ್ದರೇ, ಸುಧಾಕರ್, ಎಸ್ ಟಿ ಸೋಮಶೇಖರ್, ಬಿಸಿ ಪಾಟೀಲ್, ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ.
ಕರ್ನಾಟಕದಲ್ಲಿ ನಡೆಯದ ಗುಜರಾತ್ ಮಾಡೆಲ್
ಇನ್ನೂ ಹೊಸ ಮುಖಗಳ ಪ್ರಯೋಗಕ್ಕೆ ಇಳಿದಿದ್ದಂತ ಬಿಜೆಪಿಗೆ ಕರ್ನಾಟಕ ಜನತೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 75 ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿತ್ತು. ಇವರಲ್ಲಿ ಬರೋಬ್ಬರಿ 61 ಮಂದಿ ಸೋಲು ಕಂಡಿದ್ದಾರೆ. ಕೇವಲ 11 ಮಂದಿ ಮಾತ್ರವೇ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಘಟಾನುಘಟಿ ನಾಯಕರು ಸೋಲು
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರಿಗೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದಂತ ಜನರು ಬದಲಾವಣೆಯ ಮುದ್ರೆಯೊಂದಿಗೆ ಶಾಕ್ ನೀಡಿದ್ದಾರೆ. ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಟಿಬಿ ನಾಗರಾಜ್, ಮಾಧುಸ್ವಾಮಿ, ಸೋಮಶೇಖರ ರೆಡ್ಡಿ, ವಿ.ಸೋಮಣ್ಣ, ಬಿ.ಶ್ರೀರಾಮುಲು, ಸುಧಾಕರ್, ಬಿ.ಸಿ ಪಾಟೀಲ್, ಗೋವಿಂದ ಕಾರಜೋಳ ಹಾಗೂ ಎಂ.ಪಿ ರೇಣುಕಾಚಾರ್ಯ ಸೋಲು ಕಂಡಿದ್ದಾರೆ.
ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆಯತ್ತ ಕಾಂಗ್ರೆಸ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದತ್ತ ಸಾಗಿದೆ. ಇತ್ತೀಚಿನ ವರದಿಯಂತೆ ಬಿಜೆಪಿ 65, ಕಾಂಗ್ರೆಸ್ ಪಕ್ಷ 134, ಜೆಡಿಎಸ್ 21 ಹಾಗೂ ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ರಚನೆಯಾಗುವ ತುದಿಗಾಲಿನಲ್ಲಿದೆ.
ನಾಳೆ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ, ಸಿಎಂ ಅಭ್ಯರ್ಥಿ ಘೋಷಣೆ
ಡಿ.ಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ನಡುವೆ ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ನಡೆಯುತ್ತಿದೆ. ಈ ನಡುವೆ ನಾಳೆ ಮಹತ್ವದ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ನಾಳಿನ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಲಿದೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿದ್ದಾರೋ ಅಥವಾ ಡಿ.ಕೆ ಶಿವಕುಮಾರ್ ಗೆ ಮಣೆ ಹಾಕಲಿದ್ಯಾ ಎನ್ನುವುದನ್ನು ಕಾದು ನೋಡಬೇಕಿದೆ.