
ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಕಿರು ನಾಟಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವ ಪ್ರಕರಣವನ್ನು ಉನ್ನತ ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಸರ್ಕಾರಕ್ಕೆ ವರದಿ ನೀಡುವಂತೆ ಕಾಲೇಜಿಗೆ ಆದೇಶಿಸಿದೆ.
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದಂತಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಸಂದೇಶವನ್ನು ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.’
ಸಮಗ್ರವರದಿ ನೀಡುವಂತೆ ಸೂಚನೆ
ಭಾರತ ಸಂವಿಧಾನದ ಪಿತಾಮಹರಾದ ಡಾ. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಪ್ರದರ್ಶನವನ್ನು ಜೈನ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ.
ಈ ಕುರಿತಾಗಿ ಕೂಡಲೇ ಸಮಗ್ರ ವರದಿಯನ್ನು ಒಂದು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಈ ಮೊದಲು ತಿಳಿಸಲಾಗಿತ್ತು. ಆದರೆ, ಸಂಬಂಧಪಟ್ಟ ಪತ್ರದಲ್ಲಿ ಕೋರಿರುವ ಮಾಹಿತಿ/ವರದಿಯು ಸರ್ಕಾರಕ್ಕೆ ಈ ವರೆಗೆ ಸ್ವೀಕೃತವಾಗಿಲ್ಲ.
ಆದ್ದರಿಂದ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹಾಗೂ ವೈಯಕ್ತಿಕವಾಗಿ ಗಮನಹರಿಸಿ ಕೋರಲಾಗಿರುವ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಮತ್ತೊಮ್ಮೆ ನಿರ್ದೇಶಿಸುತ್ತಿದ್ದೇನೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.