
ಹೊಸಪೇಟೆ (ವಿಜಯನಗರ): ‘ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಆಂಜನೇಯನಿಗೆ ಬೀಗ ಹಾಕಿ ಬಂದ್ ಮಾಡಲು ನಿರ್ಣಯಿಸಿರುವುದು ದೌರ್ಭಾಗ್ಯ. ನಾನು ಹನುಮನ ಪವಿತ್ರ ಸ್ಥಳಕ್ಕೆ ಬಂದಿರುವ ದಿನವೇ ಈ ತೀರ್ಮಾನ ಕೈಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಹಂಪಿ ಶ್ರೀ ವಿರೂಪಾಕ್ಷ ಸ್ವಾಮಿ, ಶ್ರೀ ಉಗ್ರ ನರಸಿಂಹ ಸ್ವಾಮಿ, ಹುಲಿಗೆಮ್ಮ ದೇವಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಆಂಜನೇಯನ ಪವಿತ್ರ ಸ್ಥಳಕ್ಕೆ ಬಂದಿರುವೆ. ಈ ಭೂಮಿಗೆ ನನ್ನ ಪ್ರಣಾಮಗಳು. ಇದು ನನ್ನ ಸೌಭಾಗ್ಯ. ಆದರೆ, ದೌರ್ಭಾಗ್ಯ ನೋಡಿ, ನಾನು ಇಲ್ಲಿಗೆ ಬಂದ ದಿನವೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಆಂಜನೇಯನಿಗೆ ಬೀಗ ಹಾಕಿ ಬಂದ್ ಮಾಡಲು ನಿರ್ಣಯಿಸಿದೆ ಎಂದರು.
ನರೇಂದ್ರ ಮೋದಿ, ಪ್ರಧಾನಿಈ ಹಿಂದೆ ಶ್ರೀರಾಮನಿಗೆ ಬೀಗ ಹಾಕಿ ಬಂದ್ ಮಾಡಿದವರು ಈಗ ಬಜರಂಗ ಬಲಿ ಎಂದು ಹೇಳುವವರಿಗೆ ಬೀಗ ಹಾಕಿ ಬಂದ್ ಮಾಡಲು ಸಂಕಲ್ಪ ಮಾಡಿದ್ದಾರೆ. ಇದು ಈ ದೇಶದ ದೌರ್ಭಾಗ್ಯ. ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ಶ್ರೀರಾಮಚಂದ್ರನ ಬಗ್ಗೆ ತೊಂದರೆ ಇತ್ತು. ಈಗ ಜೈ ಬಜರಂಗ ಬಲಿ ಎಂಬುವವರ ಬಗ್ಗೆಯೂ ತೊಂದರೆ ಆಗುತ್ತಿದೆ. ಆದರೆ, ಬಿಜೆಪಿ ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯ ಮಾಡಲು ಸಂಕಲ್ಪ ಮಾಡಿದೆ. ಪ್ರಭು ಆಂಜನೇಯನ ಪಾದರವಂದಗಳಿಗೆ ತಲೆಬಾಗಿ ಈ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸುತ್ತೇನೆ.
ಕರ್ನಾಟಕ ಬಿಜೆಪಿ ತನ್ನ ಸಂಕಲ್ಪ ಪತ್ರ ಬಿಡುಗಡೆಗೊಳಿಸಿದ್ದು, ಇದರಲ್ಲಿ ಶ್ರೀಮಂತ ಪರಂಪರೆ, ವಿಕಾಸಕ್ಕೆ ಒತ್ತು ಕೊಟ್ಟಿದೆ. ಕರ್ನಾಟಕದ ಸಂಸ್ಕೃತಿಗೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಿದೆ. ರಾಜ್ಯದ ವಿಕಾಸ, ಜನರಿಗೆ ಆಧುನಿಕ ಸವಲತ್ತು ಕಲ್ಪಿಸಿ, ಯುವಕರಿಗೆ ಹೊಸ ಅವಕಾಶ ಸೃಷ್ಟಿಸಲು ಪಕ್ಷ ಬದ್ಧವಾಗಿದೆ ಎಂದು ಹೇಳಿದ ಅವರು, ತಮ್ಮ ಭಾಷಣದುದ್ದಕ್ಕೂ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ಸುಳ್ಳು ಭರವಸೆ, ಗ್ಯಾರಂಟಿಗಳ ಹೆಸರಿನಲ್ಲಿ ಕರ್ನಾಟಕದ ಜನತೆಯ 85 ಪರ್ಸೆಂಟ್ ಹಣದ ಮೇಲೆ ಕಣ್ಣಿಟ್ಟಿದೆ. 85 ಪರ್ಸೆಂಟ್ ಕಮಿಷನ್ ಹೊಡೆಯಲು ಯೋಚಿಸುತ್ತಿರುವ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕವನ್ನು ರಕ್ಷಿಸಬೇಕಿದೆ ಎಂದರು.