ಗಂಗಾವತಿ : ಚುನಾವಣಾ ಪ್ರಚಾರಕ್ಕಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಏ.30ರಂದು ನಗರಕ್ಕೆ ಬರಲಿದ್ದಾರೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ತಿಳಿಸಿದರು.

ಜನರಲ್ಲಿ ವಿಶ್ವಾಸ ಹೆಚ್ಚಾಗಿದ್ದು, ಬಿಜೆಪಿ ಅಲೆ ಜೋರಾಗಿದೆ

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೇ 6ರಂದು ಆದಿತ್ಯನಾಥ ಅವರು ಗಂಗಾವತಿಗೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ ಬದಲಾವಣೆಯಾಗಿ ಮೇ 3ಕ್ಕೆ ಮರು ನಿಗದಿಯಾಗಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ಘಟಕ ಯೋಗಿ ಆದಿತ್ಯನಾಥ ಅವರ ಕಾರ್ಯಕ್ರಮದಲ್ಲಿ ಮರು ಬದಲಾವಣೆ ಮಾಡಿ ಏ. 30ರಂದು ಕಾರ್ಯಕ್ರಮ ನಿಗದಿ ಮಾಡಿದೆ ಎಂದು ತಿಳಿಸಿದರು.

ಯೋಗಿ ಆದಿತ್ಯನಾಥ್ ಅವರು ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ. ಬಳಿಕ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿಯ ತಾಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಹನುಮ ಹುಟ್ಟಿದ ನಾಡು ಅಂಜನಾದ್ರಿ ಗಂಗಾವತಿಯಲ್ಲಿ ಹಿಂದುತ್ವದ ಅಲೆ ನಿರ್ಮಾಣವಾಗುತ್ತಿದ್ದು, ಯೋಗಿ ಆದಿತ್ಯನಾಥ ಅವರನ್ನು ಅಂಜನಾದ್ರಿಯಿಂದಲೇ ರಸ್ತೆ ಮೂಲಕ ರೋಡ್‌ ಶೋ ಪ್ಲ್ಯಾನ್‌ ಮಾಡಲಾಗಿದೆ. ಆದರೆ ಯೋಗಿ ಅವರ ಬಿಡುವಿಲ್ಲದ ಪ್ರವಾಸ ಮತ್ತು ಭದ್ರತೆಯ ಕಾರಣಗಳನ್ನು ಅವಲೋಕಿಸಿ ಅಂಜನಾದ್ರಿಯಿಂದ ರೋಡ್ ಶೋ ಮಾಡಲು ಪಕ್ಷದಿಂದ ಅನುಮತಿ ಸಿಗುತ್ತದೆಯೋ ಇಲ್ಲವೋ ಕಾಯ್ದು ನೋಡಬೇಕಿದೆ. ಈ ಬಗ್ಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

error: Content is protected !!