ಕೋಪ್ಪಳ: ‘ಕರ್ನಾಟಕದ ಜನರಿಗೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಈಗಾಗಲೇ ನೀಡಿರುವ ಸೌಲಭ್ಯಗಳನ್ನೇ ಕಾಂಗ್ರೆಸ್‌ ಮತ್ತೆ ನಕಲು ಮಾಡುತ್ತಿದೆ. ಆ ಪಕ್ಷ ತನ್ನ ವಾರಂಟಿ ಮುಗಿದು ಹೋದರೂ ಜನರಿಗೆ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ’ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಲೇವಡಿ ಮಾಡಿದರು.

ಇಲ್ಲಿ ಶನಿವಾರ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತಯಾಚಿಸಿದ ಅವರು ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಕಿತ್ತಾಟ ನಡೆದಿದೆ. ಆದರೆ, ಆ ಪಕ್ಷ ಸಿದ್ದರಾಮಯ್ಯ ಅವರನ್ನು ಕೋಲ್ಡ್‌ಸ್ಟೋರೇಜ್‌ನಲ್ಲಿ ಇರಿಸಿದೆ. ಹನುಮ ಉದಯಿಸಿದ ನಾಡು ಎಂದು ಹೆಸರಾದ ಕೊಪ್ಪಳ ಜಿಲ್ಲೆಯಲ್ಲಿ ಒಂದೇ ಒಂದು ಮತ ಕಾಂಗ್ರೆಸ್‌ ಪಕ್ಷಕ್ಕೆ ಹೋಗಬಾರದು’ ಎಂದರು.

‘ರಾಹುಲ್‌ ಗಾಂಧಿ ಸುಳ್ಳು ಹೇಳುತ್ತಾರೆ; ಅದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಹೌದು ಹೌದು ಎಂದು ಗೋಣು ಹಾಕುತ್ತಾರೆ. ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ₹5 ಸಾವಿರ ಕೋಟಿ ನೀಡುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬಿಜೆಪಿ ಈಗಾಗಲೇ ಇಷ್ಟೊಂದು ಹಣವನ್ನು ಕೊಟ್ಟಿದೆ. ಕಾಂಗ್ರೆಸ್‌ ಪಕ್ಷಕ್ಕೆ ಮತ ಕೊಟ್ಟರೆ ಆ ಪಕ್ಷ ರಿವರ್ಸ್ ಗೇರ್‌ನಲ್ಲಿ ಹೋಗುತ್ತದೆ’ ಎಂದರು.

error: Content is protected !!