
ಮುಳವಳ್ಳಿ (ಮಂಡ್ಯ): ‘ಕೇಂದ್ರ ಬಿಜೆಪಿ ಸರ್ಕಾರ ಸತ್ಯ ನುಡಿದವರನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಸತ್ಯವನ್ನೇ ನುಡಿದಿದ್ದರು, ಪ್ರತಿದಿನ ಅವರ ವಿರುದ್ಧ ಸರ್ಕಾರ ಷಡ್ಯಂತ್ರ ಮಾಡುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದರು.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಸತ್ಯ ನುಡಿದ ರಾಹುಲ್ ಗಾಂಧಿ ಅವರ ವಿರುದ್ಧ ಅನರ್ಹತೆಯ ಅಸ್ತ್ರ ಬಳಸಲಾಗಿದೆ. ಮನೆ ಖಾಲಿ ಮಾಡಲು ನೋಟಿಸ್ ನೀಡಲಾಯಿತು. ವಿದ್ಯುತ್, ನೀರಿನ ಪೈಪ್‌ಲೈನ್ ಬಂದ್ ಮಾಡಲಾಯಿತು. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿದೆ. ಅವರಿಗಾದ ಸ್ಥಿತಿ ನಮ್ಮೆಲ್ಲರಿಗೂ ಬರಬಹುದು’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ, ಪ್ರಜಾಪ್ರಭುತ್ವ ಉಳಿಯದಿದ್ದರೆ ಜನರ ಮತಗಳ ಮೌಲ್ಯ ಉಳಿಯುವುದಿಲ್ಲ. ಜನರಿಗೆ ಮತದಾನದ ಅಧಿಕಾರ ಇರುವ ಕಾರಣದಿಂದಲೇ ಅಭ್ಯರ್ಥಿಗಳು ಮನೆಮನೆಗೆ ಬಂದು ಮತಯಾಚನೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಈ ಹಕ್ಕು ನೀಡದಿದ್ದರೆ ಯಾರೂ ನಿಮ್ಮ ಹತ್ತಿರಕ್ಕೆ ಬರುತ್ತಿರಲಿಲ್ಲ’ ಎಂದರು.
‘ಕರ್ನಾಟಕದ ಚುನಾವಣೆ ಬಹಳ ಮಹತ್ವಪೂರ್ಣವಾಗಿದ್ದು ದೇಶದ ಜನರು ನಮ್ಮ ರಾಜ್ಯದತ್ತ ನೋಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ದೇಶದ ಜನರು ಜಾಗೃತರಾಗುತ್ತಾರೆ. ಬಿಜೆಪಿ ಸರ್ಕಾರ ಸಂವಿಧಾನವನ್ನು ತಿರುಚುವ ಕೆಲಸ ಮಾಡುತ್ತಿದೆ. ದೇಶದ ಸಂವಿಧಾನ ರಕ್ಷಣೆ ಮಾಡುವುದಕ್ಕಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಬೇಕು’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ‘ರಾಜ್ಯದ ಜನರು ಜೂನ್ 1ರಿಂದ ಕರೆಂಟ್ ಬಿಲ್ ಕಟ್ಟಬೇಕಾಗಿಲ್ಲ. ಹೊಸ ಕಾಂಗ್ರೆಸ್ ಸರ್ಕಾರ ಬರಲಿದ್ದು ಜನರ ಕಷ್ಟದ ದಿನಗಳು ಕೊನೆಗೊಳ್ಳಲಿವೆ. ಪ್ರತಿ ಮನೆಗೂ ₹ 24 ಸಾವಿರ ಹಣ ಬರಲಿದೆ, 10 ಕೆ.ಜಿ ಅಕ್ಕಿ ಬರಲಿದೆ’ ಎಂದರು.