
ಕನಕಗಿರಿ: ಚುನಾವಣಾ (Karnataka election 2023) ಪ್ರಚಾರಕ್ಕೆ ಆಗಮಿಸಿದ್ದ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಚುನಾವಣೆ ನಿಮಿತ್ತ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷದ ಶಿವರಾಜ್ ತಂಗಡಗಿ ತೆರಳಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರೊಬ್ಬರು ಈ ಹಿಂದೆ ಗ್ರಾಮದಲ್ಲಿ ಕೋಮು ಗಲಭೆಯಾದ ಸಂದರ್ಭದಲ್ಲಿ ಗಲಭೆಯ ಕಾರಣ ನಿಮ್ಮ ಊರಿನ ಸಹವಾಸ ಸಾಕು. ನನಗೆ ನಿಮ್ಮ ಮತಗಳು ಬೇಡ ಎಂಬ ಹೇಳಿಕೆ ನೀಡಿದ್ದಿರಿ. ಊರಿನ ಸಹವಾಸ ಬೇಡ ಎಂದವರು ಈಗ ಮತ್ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತಗೆದುಕೊಂಡರು.

ತಂಗಡಗಿ ಅವರನ್ನು ಪ್ರಶ್ನಿಸಿದ್ದರಿಂದ ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಾಕಷ್ಟು ಮಾತುಗಳು ಎರಡೂ ಕಡೆ ಕೇಳಿಬಂದವು. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಶಿವರಾಜ ತಂಗಡಗಿ ಅವರು ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಬಳಿಕ ಮಾತನಾಡಿದ ಶಿವರಾಜ ತಂಗಡಗಿ, ನಾನು ಅಂದು ಆ ರೀತಿ ಹೇಳಬೇಕಾದರೆ ಪರಿಸ್ಥಿತಿಯ ಒತ್ತಡವಿತ್ತು. ಗಲಾಟೆಯ ಸಂದರ್ಭದಲ್ಲಿ ಮುಖಂಡರು ಮಧ್ಯಸ್ಥಿಕೆ ವಹಿಸಿದರೆ ಗಲಾಟೆ ತೀವ್ರಗೊಳ್ಳುವ ಆತಂಕವಿತ್ತು. ಆದ್ದರಿಂದ ಆ ಸೂಕ್ಷ್ಮವನ್ನು ಅರಿತುಕೊಂಡು ಆ ರೀತಿಯ ಹೇಳಿಕೆ ನೀಡಬೇಕಾಯಿತು. ಅದು ಸಾಂದರ್ಭಿಕವಷ್ಟೇ. ನಿಮ್ಮ ಮೇಲೆ ಯಾವತ್ತೂ ಅಭಿಮಾನ ಉಳ್ಳವನಾಗಿದ್ದೇನೆ ಎಂದು ಸಮಾಧಾನಪಡಿಸಿದರು.