ತಂಡಗಳ ಕಾರ್ಯಾಚರಣೆ, ಕಾರ್ಯಕ್ಷಮತೆ ಬಲಪಡಿಸಲು ಸಲಹೆ

ಕೊಪ್ಪಳ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ತಂಡಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿನುಸಾರ ಪ್ರಾಮಾಣಿಕತೆಯಿಂದ ಮತ್ತು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿನ ಕೇಸ್ವಾನ್ ಹಾಲನಲ್ಲಿ ಏಪ್ರೀಲ್ 15ರಂದು ಕೊಪ್ಪಳ, ಕನಕಗಿರಿ, ಯಲಬುರ್ಗಾ, ಗಂಗಾವತಿ ಮತ್ತು ಕುಷ್ಟಗಿ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಆಯಾ ವಿಧಾನಸಭಾ ಕ್ಷೇತ್ರಗಳವಾರು ಕಂಟ್ರೋಲ್ ರೂಮು ಮಾಡಿ, ಚುನಾವಣಾ ಹಿನ್ನೆಲೆಯಲ್ಲಿ ರಚನೆಯಾದ ತಂಡಗಳ ಮೇಲೆ ನಿಗಾವಹಿಸಿ, ಚುನಾವಣಾ ಕಾರ್ಯದ ಬಗ್ಗೆ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಮರುಕಳಿಸದಂತೆ ನಿಗಾವಹಿಸಲು ವಿವಿಧ ತಂಡಗಳಿಂದ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಬಲಪಡಿಸಬೇಕು ಎಂದರು.

ಪ್ರಚಾರ ವಾಹನಕ್ಕೆ ಅನುಮತಿ, ಸಭೆ ಸಮಾರಂಭ ನಡೆಸಲಿಕ್ಕೆ ಹಾಗೂ ಇನ್ನೀತರ ಯಾವುದೇ ಅನುಮತಿ ಕೋರಿ ಬರುವ ಅರ್ಜಿಗಳಿಗೆ ಕೂಡಲೇ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಆರ್‌ಓ ಮತ್ತು ಎಆರ್‌ಓಗಳಿಗೆ ನಿರ್ದೇಶನ ನೀಡಿದರು.

ಸಿ-ವಿಜಿಲ್ ಆ್ಯಪ್ ಬಗ್ಗೆ ಅರಿತುಕೊಳ್ಳಬೇಕು. ಎಫ್‌ಎಸ್‌ಟಿ, ವಿವಿಟಿ, ಎಸ್‌ಎಸ್‌ಟಿ, ವಿಎಸ್‌ಟಿ ತಂಡಗಳು ಹಾಗೂ ಪಿಡಿಓ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಸಿ-ವಿಜಿಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬೇಕು. ಅಬಕಾರಿ, ಪೊಲೀಸ್ ಹಾಗೂ ಇನ್ನೀತರ ದಾಳಿಯ ವಿವರ ಮತ್ತು ಇನ್ನೀತರ ಉಲ್ಲಂಘನೆಯ ವಿವರಗಳನ್ನು ಎಫ್‌ಎಸ್‌ಟಿ, ಎಸ್‌ಎಸ್‌ಟಿ ಮತ್ತು ವಿಎಸ್‌ಟಿ ತಂಡಗಳ ಮೂಲಕ ಸಿ-ವಿಜಿಲ್ ನಲ್ಲಿ ಹಾಕಿ ವರದಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮತಗಟ್ಟೆಗಳಲ್ಲಿ ಮುಖ್ಯವಾಗಿ ಕುಡಿಯುವ ನೀರು, ಶೌಚಾಲಯ, ರ್ಯಾಂಪ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ, ಕಾವ್ಯರಾಣಿ ಕೆ.ವಿ., ಸಮೀರ್ ಮುಲ್ಲಾ, ಮಲ್ಲಿಕಾರ್ಜುನ, ಚಿದಾನಂದಪ್ಪ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಇದ್ದರು.

error: Content is protected !!