ದೇವದುರ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಧಿಕಾರಿಗಳು ಪಟ್ಟಣದ ಪುರಸಭೆ ಕಚೇರಿ ಬಳಿ ಅಳವಡಿಸಲಾದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಭಾವಚಿತ್ರ ಇರುವ ಬ್ಯಾನರ್ ತೆರವು ಮಾಡಿಲ್ಲ.

ಕಳೆದ ವಾರ ನೀತಿ ಸಂಹಿತೆ ಜಾರಿಯಾದ ನಂತರವೂ ಇಂದಿರಾ ಕ್ಯಾಂಟೀನ್ ಮೇಲಿನ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾವಚಿತ್ರ ತೆರವು ಮಾಡದ ಕಾರಣ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ದೇವದುರ್ಗ ಚುನಾವಣಾಧಿಕಾರಿ ಶಿಫಾರಸು ಮಾಡಿದ್ದರು.

ಆದರೆ ಜಿಲ್ಲಾ ಚುನಾವಣಾಧಿಕಾರಿ ಮುಖ್ಯಾಧಿಕಾರಿಯನ್ನು ಲಿಂಗಸುಗೂರಿಗೆ ವರ್ಗಾವಣೆ ಮಾಡಿದ್ದರು. ಇಷ್ಟಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಅಂಥದ್ದೇ ಪ್ರಕರಣ ಮರುಕಳಿಸಿದೆ.

ಕಳೆದ ವಾರ ಶಾಸಕರ ಭಾವಚಿತ್ರ ಇದ್ದ ಪಟ್ಟಣದಲ್ಲಿ ಓಡಾಡುತ್ತಿದ್ದ ಆಂಬುಲೆನ್ಸ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

‘ತಾಲ್ಲೂಕಿನಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಕ್ರಮ ಕೈಗೊಳ್ಳದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಜೆಡಿಎಸ್ ಮುಖಂಡ ಶರಣಗೌಡ ಸುಂಕೇಶ್ವರಹಾಳ ತಿಳಿಸಿದರು.

‘ನೀತಿ ಸಂಹಿತೆ ಉಲ್ಲಂಘನೆ ಕುರಿತು ಮಾಹಿತಿ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದು ಚುನಾವಣಾ ಅಧಿಕಾರಿ ಎಂ.ಎನ್.ಚೇತನ ಕುಮಾರ ಪ್ರತಿಕ್ರಿಯಿಸಿದರು.

error: Content is protected !!