
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಕ್ಕಾ ಮಾಡಿಕೊಂಡಿರುವ ಹಲವು ಅಭ್ಯರ್ಥಿಗಳು ಹಣದ ಹೊಳೆ ಹರಿಸಲು ರಣತಂತ್ರ ರೂಪಿಸಿರುವ ಬೆನ್ನಲ್ಲೇ ಅಕ್ರಮ ಕಾಂಚಾಣದ ಸದ್ದಡಗಿಸಲು ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆಗಳು ಸನ್ನದ್ಧವಾಗಿವೆ.
ಇನ್ನು 10 ಲಕ್ಷ ರೂ. ಹಾಗೂ ಅದಕ್ಕೂ ಮೇಲ್ಪಟ್ಟು ನಗದು ಪತ್ತೆಯಾದರೆ ಅಂತಹ ಹಣದ ಮೂಲ ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಪ್ರವೇಶಿಸಲಿದೆ.
ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ 71.27 ಕೋಟಿ ರೂ. ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ 55.11 ಕೋಟಿ ರೂ. ಅನ್ನು ಪೊಲೀಸರು ಜಪ್ತಿ ಮಾಡಿದ್ದರೆ 16.15 ಕೋಟಿ ರೂ. ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಪ್ರಮಾಣದ ನಗದನ್ನು ಪೊಲೀಸರು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ 10 ಲಕ್ಷ ರೂ. ಹಾಗೂ ಅದಕ್ಕೂ ಮೇಲ್ಪಟ್ಟು ನಗದು ಪತ್ತೆಯಾದರೆ ಕಡ್ಡಾಯವಾಗಿ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ನಿರ್ದೇಶಕ (ಎಲೆಕ್ಷನ್ ನೋಡಲ್ ಅಧಿಕಾರಿ) ಪ್ರಿಯದರ್ಶಿ ಮಿಶ್ರಾ, ಕರ್ನಾಟಕ ಪೊಲೀಸ್ ಇಲಾಖೆಗೆ ಲಿಖಿತವಾಗಿ ಸೂಚನೆ ರವಾನಿಸಿದ್ದಾರೆ. ನಗದನ್ನು ಜಪ್ತಿ ಮಾಡಿಕೊಳ್ಳುವ ಪೊಲೀಸರು, ನ್ಯಾಯಾಲಯಕ್ಕೆ ವರದಿ ಕೊಟ್ಟ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆಗ ಹಣದ ಮೂಲದ ಬಗ್ಗೆ ಪುನಃ ಪರಿಶೀಲನೆ ಮಾಡಬೇಕಾಗುಗುತ್ತದೆ.
ಆದ್ದರಿಂದ ಎರಡೂ ಇಲಾಖೆಗಳ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ ನಗದು ಪತ್ತೆಯಾದ ಸಂದರ್ಭದಲ್ಲೇ ಐಟಿ ಇಲಾಖೆಗೆ ಮಾಹಿತಿ ಕೊಟ್ಟರೆ ಪಾರದರ್ಶಕ ಪರಿಶೀಲನೆಯ ಜತೆಗೆ ಸಮಯವೂ ಉಳಿತಾಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿ ಕ್ಷೇತ್ರಕ್ಕೂ ನೋಡಲ್ ಅಧಿಕಾರಿ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ಐಟಿ ಇಲಾಖೆ ನಿಯೋಜಿಸಿದೆ. ಚುನಾವಣಾ ನಿಯಮಗಳ ಉಲ್ಲಂಘನೆಗಳ ಬಗ್ಗೆ ನಿಗಾ ವಹಿಸುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಗಳಿಗೆ ನೀಡಲಾಗಿದೆ. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಬರುವಂತಹ ದೂರುಗಳನ್ನು ಸ್ವೀಕರಿಸಿ, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ.
ಎಷ್ಟು ಒಯ್ಯಬಹುದು?: ರಾಜ್ಯದಲ್ಲಿ ಮೇ 14ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಅಲ್ಲಿಯವರೆಗೆ ಜನರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಒಯ್ಯಬಹುದು. ಇದಕ್ಕಿಂತ ಹೆಚ್ಚಿನ ಹಣವಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ದಾಖಲೆ ಇಲ್ಲದಿದ್ದರೆ ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆಸ್ಪತ್ರೆ, ಶುಭ ಸಮಾರಂಭ ಸೇರಿ ಇನ್ನಿತರ ವೈಯಕ್ತಿಕ ವ್ಯವಹಾರಗಳಿಗೆ ಹಣ ತೆಗೆದುಕೊಂಡು ಹೋಗಬಹುದು. ಅಧಿಕಾರಿಗಳು ಕೇಳಿದಾಗ ಸೂಕ್ತ ಕಾರಣ ಹಾಗೂ ದಾಖಲೆ ತೋರಿಸಬೇಕು.
ಐಟಿ ಏನು ಮಾಡುತ್ತೆ?: ನಗದು ಪತ್ತೆಯಾದ ಬಗ್ಗೆ ಮಾಹಿತಿ ಕೊಟ್ಟರೆ ಸ್ಥಳಕ್ಕೆ ಧಾವಿಸುವ ನೋಡಲ್ ಅಧಿಕಾರಿಗಳು ಆದಾಯ ತೆರಿಗೆ ಕಾಯ್ದೆಯ ಅನ್ವಯ ಪ್ರಕ್ರಿಯೆಗಳನ್ನು ಕೈಗೊಂಡು ಕ್ರಮ ಕೈಗೊಳ್ಳುತ್ತಾರೆ. ಪೊಲೀಸ್ ಅಧಿಕಾರಿಗಳ ಸಹಕಾರದಲ್ಲೇ ಪರಿಶೀಲನೆ ನಡೆಸಲಿದ್ದು, ನಗದು ಜಪ್ತಿ ಮಾಡಿಕೊಂಡು, ಹಣ ಹೊಂದಿದ್ದ ವ್ಯಕ್ತಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಇದರಿಂದ ಪತ್ತೆಯಾದ ಹಣ ದಾಖಲೆಗಳು ಇಲ್ಲದ್ದೇ ಅಥವಾ ದಾಖಲೆಗಳಿರುವ ವ್ಯಾವಹಾರಿಕ ಹಣವೇ ಎಂಬುದು ತಿಳಿಯುತ್ತದೆ. ಜತೆಗೆ ಎರಡೆರಡು ಪುಸ್ತಕಗಳಲ್ಲಿ ನಮೂದು ಮಾಡುವ ಅಗತ್ಯವಿರುವುದಿಲ್ಲ.