
ರಾಯಚೂರು :ಹಟ್ಟಿ ಚಿನ್ನದ ಗಣಿ: ಲಿಂಗಸುಗೂರು ತಾಲ್ಲೂಕಿನ ಆನ್ವರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಆನ್ವರಿ ಗ್ರಾಮದಲ್ಲಿ ಒಟ್ಟು 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, 4 ವಾರ್ಡ್‌ಗಳಿವೆ. 14 ಜನ ಸದಸ್ಯರಿದ್ದಾರೆ.
ಬೇಸಿಗೆ ಬಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಮಹಿಳೆಯರು, ಮಕ್ಕಳು ಕುಡಿಯುವ ನೀರು ತರಲು ನಿತ್ಯ ಅಲೆದಾಡುವಂತಾಗಿದೆ.
‘ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಸಂಬಂಧಪಟ್ಟ ಗ್ರಾ.ಪಂ ಅಧಿಕಾರಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಿಳಿಸಿದರೂ ಅವರಿಗೆ ಜನರ ನೋವು ತಿಳಿಯದಾಗಿದೆ. ಸಾರ್ವಜನಿಕ ಸಮಸ್ಯೆಯನ್ನು ಬಗೆಹರಿಸುವವರೆ ಇಲ್ಲದಂತಾಗಿದೆ’ ಎಂದು ಗ್ರಾಮಸ್ಥ, ಜೈ ಶ್ರೀರಾಮ ಸಂಘಟನೆಯ ಅಧ್ಯಕ್ಷ ಬಸವರಾಜ ನಾಯಕ ಆರೋಪಿಸುತ್ತಾರೆ.
‘ಶುದ್ಧ ಕುಡಿಯುವ ನೀರಿನ ಒಂದೇ ಘಟಕ ಇದ್ದು, ಅದು ಕೆಲವೊಮ್ಮೆ ಕೆಟ್ಟು ನಿಂತರೆ ನೀರಿಗಾಗಿ ಕಿ.ಮೀ ದೂರದ ಊರಿಗೆ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಧಿತಿ ಎದುರಾಗುತ್ತಿದೆ. 3ನೇ ವಾರ್ಡ್‌ನಲ್ಲಿ ಬೋರ್‌ವೆಲ್ ಕೆಟ್ಟು ನಿಂತಿದೆ. ದುರಸ್ತಿ ಮಾಡಿಸಿ ಎಂದು ಸದಸ್ಯರಿಗೆ ಮತ್ತು ಪಿಡಿಒ ಅವರಿಗೆ ತಿಳಿಸಿದರೂ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಗಂಗಪ್ಪ ಮದರಕಲ್ಲು, ಶಿವರಾಜ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
‘ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಆಗಮಿಸುತ್ತಾರೆ. ಆದರೆ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಇಂವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಗ್ರಾಮಸ್ಧರು ಕಲಿಸುತ್ತೇವೆ’ ಎಂದು ಇಲ್ಲಿನ ಜನರು ಎಚ್ಚರಿಸಿದ್ದಾರೆ.
‘ಅಧಿಕಾರಿಗಳು, ಹಣವಿದ್ದ ಜನರು ದುಡ್ಡು ಕೊಟ್ಟು ನೀರನ್ನು ಖರೀದಿಸಿ ಕುಡಿಯುತ್ತಾರೆ. ಆದರೆ ಬಡವರು ನಳದ ನೀರನ್ನೇ ಅವಲಂಬಿಸಿದ್ದೇವೆ. ಬಡವರ ಸಮಸ್ಯೆಗಳನ್ನು ಗ್ರಾಮದಲ್ಲಿ ಕೇಳುವವರೆ ಇಲ್ಲದಂತಾಗಿದೆ’ ಎನ್ನುತ್ತಾರೆ ಆನ್ವರಿ ಗ್ರಾಮದ ಜನರು.
‘ಸಂಬಂಧಪಟ್ಟ ಗ್ರಾ.ಪಂ ಅಧಿಕಾರಿಗಳು ಮತ್ತು ಸದಸ್ಯರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.