
ಇಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 132ನೇ ಜನ್ಮದಿನ. ಇವರು 1891, ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್‌ನಲ್ಲಿ ಜನಿಸಿದರು. ಮಹಾರ ಜಾತಿಯಲ್ಲಿ ಜನಿಸಿದ ಇವರು, ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು.
ಅಂಬೇಡ್ಕರ್ ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಹಾಗೂ ಭೀಮ ಜಯಂತಿ ಎಂದೂ ಆಚರಿಸಲಾಗುತ್ತದೆ.
ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್ ಅವರು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎಂದು ಖ್ಯಾತಿ ಪಡೆದವರು. ಅವರು ವಿಶ್ವದರ್ಜೆಯ ವಕೀಲರು, ಸಾಮಾಜ ಸುಧಾರಕರೂ ಆಗಿದ್ದವರು. ಭಾರತದ ದಲಿತ ಚಳವಳಿಗಳ ಹಿಂದಿನ ಶಕ್ತಿ ಎಂಬ ಹೆಗ್ಗಳಿಕೆಯೂ ಇವರದ್ದು.

ಅಂಬೇಡ್ಕರ್ ಅವರ ವೈಯಕ್ತಿಕ ಜೀವನದ ಕುರಿತು
ಹುಟ್ಟಿದ್ದು: ಏಪ್ರಿಲ್ 14, 1891
ಜನ್ಮಸ್ಥಳ: ಮಧ್ಯಪ್ರದೇಶದ ಮಾಹೋ
ಮರಣ: 1956, ಡಿಸೆಂಬರ್ 6
ತಂದೆ: ರಾಮ್‌ಜಿ ಮಾಲೋಜಿ ಸಕ್ಪಾಲ್
ತಾಯಿ: ಭೀಮಾಬಾಯಿ
ಮಡದಿಯರು: ರಮಾಬಾಯಿ ಅಂಬೇಡ್ಕರ್ (1906ರಲ್ಲಿ ಮದುವೆಯಾಗಿದ್ದು, ಮರಣ: 1935) ಮತ್ತು ಡಾ. ಸವಿತಾ ಅಂಬೇಡ್ಕರ್ (ಮದುವೆಯಾಗಿದ್ದು 1948ರಲ್ಲಿ, ಮರಣ: 2003).

ಪುತ್ರ: ಯಶವಂತ್ ಭೀಮರಾವ್ ಅಂಬೇಡ್ಕರ್
ಮೊಮ್ಮಗ: ಪ್ರಕಾಶ್ ಅಂಬೇಡ್ಕರ್
ವಿದ್ಯಾಭ್ಯಾಸ: ಯೂನಿವರ್ಸಿಟಿ ಆಫ್ ಮುಂಬೈ (ಬಿಎ), ಕೊಲಂಬಿಯಾ ಯೂನಿವರ್ಸಿಟಿ (ಎಂ.ಎ., ಪಿಎಚ್‌ಡಿ, ಎಲ್‌ಎಲ್‌ಡಿ), ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಂಎಸ್ಸಿ, ಡಿಎಸ್‌ಸಿ), ಗ್ರೇಸ್ ಇನ್ (ಬ್ಯಾರಿಸ್ಟರ್ ಅಟ್ ಲಾ).
ರಾಜಕೀಯ ಪಕ್ಷ: ಪರಿಶಿಷ್ಟ ಜಾತಿ ಒಕ್ಕೂಟ, ಸ್ವತಂತ್ರ ಕಾರ್ಮಿಕ ಪಕ್ಷ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಸಾಮಾಜಿಕ ಸಂಸ್ಥೆಗಳು: ಬಹಿಷ್ಕೃತ ಹಿತಕಾರಿಣಿ ಸಭಾ, ಸಮತಾ ಸೈನಿಕ ದಳ
ಅಂಬೇಡ್ಕರ್ ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳಿವು
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಅವರ ತಾಯಿಗೆ 14ನೇ ಹಾಗೂ ಕೊನೆಯ ಮಗನಾಗಿದ್ದರು.
ಅಂಬೇಡ್ಕರ್ ಅವರ ನಿಜವಾದ ಉಪನಾಮ ಅಂಬಾವಾಡೇಕರ್. ಆದರೆ ಅವರ ಶಿಕ್ಷಕರಾದ ಮಹಾದೇವ ಅಂಬೇಡ್ಕರ್ ಶಾಲಾ ದಾಖಲಾತಿಯಲ್ಲಿ ಅವರ ಹೆಸರನ್ನು ʼಅಂಬೇಡ್ಕರ್ʼ ಎಂದು ಬದಲಿಸಿದ್ದರು.
ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪದವಿ ಪಡೆದ ಮೊದಲ ಭಾರತೀಯ.
ಇವರು ಸುಮಾರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು. ಹಿಂದಿ, ಪಾಳಿ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್ ಹಾಗೂ ಗುಜರಾತಿ ಹೀಗೆ 9 ಭಾಷೆಗಳನ್ನು ಬಲ್ಲವರಾಗಿದ್ದರು. 21 ವರ್ಷಗಳ ಕಾಲ ಹಲವು ದೇಶಗಳಲ್ಲಿ ಅಧ್ಯಯನ ನಡೆಸಿದ್ದರು.
ಹಿಂದೂ ಕುಟುಂಬದಲ್ಲಿ ಜನಿಸಿದ್ದ ಅಂಬೇಡ್ಕರ್, 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ.
ಲಂಡನ್ ಮ್ಯೂಸಿಯಂನಲ್ಲಿ ಖ್ಯಾತ ಚಿಂತಕ ಕಾರ್ಲ್ ಮಾರ್ಕ್ಸ್ ಅವರ ಪ್ರತಿಮೆಯ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಇದ್ದು, ಈ ಮ್ಯೂಸಿಯಂನಲ್ಲಿ ಪ್ರತಿಮೆ ಹೊಂದಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು.
ಭಾರತೀಯ ತ್ರಿವರ್ಣ ಧ್ವಜದಲ್ಲಿ ʼಅಶೋಕ ಚಕ್ರʼಕ್ಕೆ ಸ್ಥಾನ ನೀಡಿದ ಕೀರ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಸಲ್ಲುತ್ತದೆ.
ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ಅಭಿವೃದ್ಧಿಗಾಗಿ 50ರ ದಶಕದಲ್ಲಿ ರಾಜ್ಯ ವಿಭಜನೆಯನ್ನು ಪ್ರಸ್ತಾಪಿಸಿದ್ದರು.
ಇವರ ವೈಯಕ್ತಿಕ ಗ್ರಂಥಾಲಯ ʼರಾಜ್‌ಗೃಹʼದಲ್ಲಿ 50,000ಕ್ಕೂ ಹೆಚ್ಚು ಪುಸ್ತಕಗಳಿದ್ದವು. ಇದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯ ಎನ್ನಿಸಿಕೊಂಡಿದೆ.
ಅಂಬೇಡ್ಕರ್ ಅವರು ಬರೆದ ʼವೈಟಿಂಗ್ ಫಾರ್ ವೀಸಾʼ ಪುಸ್ತಕವು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿದೆ.
2004ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯವು ವಿಶ್ವದ ಅಗ್ರ 100 ಮಂದಿ ವಿದ್ವಾಂಸರ ಪಟ್ಟಿ ಮಾಡಿತ್ತು, ಆ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರು ಮೊದಲ ಸ್ಥಾನದಲ್ಲಿತ್ತು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ 8 ವರ್ಷಗಳ ಓದನ್ನು ಅಂಬೇಡ್ಕರ್ ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಅವರು ಪ್ರತಿದಿನ 21ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.
ಅಂಬೇಡ್ಕರ್ ಅವರು 6,00,000 ಅನುಯಾಯಿಗಳೊಂದಿಗೆ ಬೌದ್ಧ ಧರ್ಮದ ದೀಕ್ಷೆಯನ್ನು ಪಡೆಯುತ್ತಾರೆ. ಇದು ವಿಶ್ವದ ಅತಿದೊಡ್ಡ ಮತಾಂತರವಾಗಿತ್ತು.
ಬಾಬಾಸಾಹೇಬರಿಗೆ ಬೌದ್ಧ ಧರ್ಮಕ್ಕೆ ದೀಕ್ಷೆ ನೀಡಿದ ಮಹಾನ್ ಬೌದ್ಧ ಸನ್ಯಾಸಿ ಮಹಾಂತ್ ವೀರ್ ಚಂದ್ರಮಣಿ ಅಂಬೇಡ್ಕರ್ ಅವರನ್ನು ʼಈ ಯುಗದ ಆಧುನಿಕ ಬುದ್ಧʼ ಎಂದು ಕರೆದಿದ್ದರು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ʼಡಾಕ್ಟರ್ ಆಲ್ ಸೈನ್ಸ್ʼ ಎಂಬ ಮೌಲ್ಯಯುತ ಡಾಕ್ಟರೇಟ್ ಪದವಿಯನ್ನು ಪಡೆದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿ ಬಾಬಾಸಾಹೇಬ್. ಅನೇಕ ಬುದ್ಧಿವಂತ ವಿದ್ಯಾರ್ಥಿಗಳು ಇದಕ್ಕಾಗಿ ಪ್ರಯತ್ನಿಸಿದ್ದರು. ಆದರೆ ಇಲ್ಲಿಯವರೆಗೆ ಯಾರಿಗೂ ಅದು ಸಾಧ್ಯವಾಗಿರಲಿಲ್ಲ.
ಪ್ರಪಂಚದಾದ್ಯಂತ ಇವರ ಹೆಸರಿನಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಗೂ ಪುಸ್ತಕಗಳನ್ನು ಬರೆಯಲಾಗಿದೆ.
ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಸತ್ಯಾಗ್ರಹಿ.
ಬಾಬಾಸಾಹೇಬರ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಅವರ ಜನ್ಮ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ʼದಿ ಮೇಕರ್ಸ್ ಆಫ್ ದಿ ಯೂನಿವರ್ಸ್ʼ ಎಂಬ ಜಾಗತಿಕ ಸಮೀಕ್ಷೆಯ ಆಧಾರದ ಮೇಲೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಕಳೆದ 10 ಸಾವಿರ ವರ್ಷಗಳಲ್ಲಿ ಅಗ್ರ 100 ಮಾನವತಾವಾದಿಗಳ ಪಟ್ಟಿಯನ್ನು ತಯಾರಿಸಿತ್ತು. ಅದರಲ್ಲಿ ಅಂಬೇಡ್ಕರ್ ಅವರ ಹೆಸರು ನಾಲ್ಕನೇ ಸ್ಥಾನದಲ್ಲಿದೆ.
ಅವರು ʼದಿ ಪ್ರಾಬ್ಲಂ ಆಫ್ ರುಪಿ-ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸಲ್ಯೂಷನ್ʼ ಪುಸ್ತಕದಲ್ಲಿ ಪ್ರಸ್ತುತ ಸಮಯದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿರುವ ನೋಟು ಅಮಾನ್ಯೀಕರಣದ ಬಗ್ಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ.
ಅಂಬೇಡ್ಕರ್ ಅವರ ಮೊದಲ ಪ್ರತಿಮೆಯನ್ನು ಅವರು ಬದುಕಿದ್ದಾಗಲೇ ಅಂದರೆ 1950ರಲ್ಲಿ ಸ್ಥಾಪಿಸಲಾಗಿತ್ತು, ಈ ಪ್ರತಿಮೆ ಕೊಲ್ಲಾಪುರ ನಗರದಲ್ಲಿದೆ.
ನವೆಂಬರ್ 27, 1942 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನದ 7ನೇ ಅಧಿವೇಶನದಲ್ಲಿ, ಅಂಬೇಡ್ಕರ್ ಅವರು ಕೆಲಸದ ಅವಧಿಯನ್ನು 12 ರಿಂದ 8 ಗಂಟೆಗಳವರೆಗೆ ಕಡಿಮೆ ಮಾಡಿದರು.
ಇಷ್ಟೇ ಅಲ್ಲದೆ ಇನ್ನೂ ಹಲವು ಸಾಧನೆಗಳ ಹರಿಕಾರ ಡಾ. ಬಿ. ಆರ್. ಅಂಬೇಡ್ಕರ್. ಇವರು ಭಾರತ ಕಂಡ ಧೀಮಂತ ನಾಯಕ. ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕ.