ಬೆಂಗಳೂರು ಏಪ್ರಿಲ್‌ 07; ಚುನಾವಣಾ ಆಯೋಗ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಮಾರ್ಚ್ 29ರಂದು ಘೋಷಣೆ ಮಾಡಿದೆ. ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾಧಿಕಾರಿಗಳು ಕರ ಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಬ್ಯುಸಿ ಇರುತ್ತಾರೆ . ರಾಜಕೀಯ ಪಕ್ಷಗಳ, ಸ್ವತಂತ್ರ ಅಭ್ಯರ್ಥಿಗಳು ಕರಪತ್ರ, ಬ್ಯಾನರ್, ಪೋಸ್ಟರ್ ಮುದ್ರಣ ಮಾಡುತ್ತಾರೆ. ಆದ್ದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಿಂಟಿಂಗ್ ಪ್ರೆಸ್ ಮಾಲೀಕರ ಜೊತೆ ಸಭೆ ನಡೆಸುತ್ತಿದ್ದಾರೆ. ಮಾಲೀಕರು ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸೂಚನೆಯನ್ನು ನೀಡುತ್ತಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್‌ ಅನ್ನು ಮುದ್ರಿಸುವ ಮೊದಲು ಆಯಾ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿ (ಆರ್‌ಓ) ಅವರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿಯ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ. ಮುದ್ರಕರು ಪಾಂಪ್ಲೆಟ್‌ಗಳು ಮತ್ತು ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಲೇಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡುವಂತಿಲ್ಲ.

ತಾವು ಮುದ್ರಿಸುವ ಒಂದು ಪ್ರತಿಯನ್ನು, ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಆರ್‌ಓಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು. ಪ್ರತಿ ಪೇಜಿನ ಮುದ್ರಣಕ್ಕೆ ಈಗಾಗಲೇ ಹಣ ನಿಗದಿಪಡಿಸಲಾಗಿದೆ. ಕರಪತ್ರ, ಫಲಕ, ಪೋಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು.

ಯಾವುದೇ ಜಾತಿ, ಧರ್ಮದ ಜನರ ಭಾವನೆಗೆ ಧಕ್ಕೆ ತರುವ ವಿಷಯವನ್ನು ಮುದ್ರಿಸಬಾರದು. ಮಾಲೀಕರು ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಚುನಾವಣಾ ಬಹಿಷ್ಕಾರದಂತಹ ಪೋಸ್ಟರ್, ಕರಪತ್ರ ಮತ್ತು ಬ್ಯಾನರ್ ಮುದ್ರಿಸುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.

6 ತಿಂಗಳ ಜೈಲು ಶಿಕ್ಷೆ ಕರ್ನಾಟಕದಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ವಿದ್ಯುನ್ಮಾನ ವಾಹಿನಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ, ಸ್ವತಂತ್ರ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. 1951ರ ಆರ್‌ಪಿಎ ಕಾಯಿದೆ ಸೆಕ್ಷನ್ 127ಎ ರನ್ವಯ ಮುದ್ರಣ ಮಾಧ್ಯಮದ ಮೂಲಕ ಜಾಹೀರಾತಿಗೆ ಸಂಬಂಧಿಸಿದ ನಿಯಮಗಳನ್ನು ಪಾಲನೆ ಮಾಡಬೇಕು. ಚುನಾವಣಾ ಪಾಂಪ್ಲೆಟ್‌ಗಳು ಮತ್ತು ಪೋಸ್ಟರ್‌ಗಳು ಮುದ್ರಕರ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸ ಒಳಗೊಂಡಿರಬೇಕು.

ಪಾಂಪ್ಲೆಂಟ್ ಮತ್ತು ಪೋಸ್ಟರ್‌ಗಳನ್ನು ಮುದ್ರಕರ ಹೆಸರು ಮತ್ತು ವಿಳಾಸವಿಲ್ಲದೇ ಪ್ರಕಟಿಸುವಂತಿಲ್ಲ. ಹೋಲ್ಡಿಂಗ್ಸ್, ಫೆಕ್ಸ್ ಬೋರ್ಡ್‌ಗಳಲ್ಲಿ ವಿಳಾಸ ಮತ್ತು ಹೆಸರು ಇರುವಂತೆ ನೋಡಿಕೊಳ್ಳಬೇಕು. ಪ್ರಕಾಶಕರ ವಿಳಾಸ, ಘೋಷಣೆ ಮತ್ತು ಇಬ್ಬರು ಪರಿಚಿತ ವ್ಯಕ್ತಿಗಳ ದೃಢೀಕರಣವಿರಬೇಕು. ಪೋಸ್ಟರ್ ಮತ್ತು ಪಾಂಪ್ಲೆಟ್‌ಗಳಲ್ಲಿ ಕಾನೂನು ಬಾಹಿರ ವಿಷಯ, ಜಾತಿ ಧರ್ಮ ನಿಂದನೆಯ ವಿಷಯ ಮತ್ತು ಕ್ಷುಲ್ಲಕ ಭಾಷೆ ಬಳಸಬಾರದು. ಈ ನಿಯಮ ಪಾಲನೆ ಮಾಡದಿದ್ದಲ್ಲಿ ಆರ್‌ಪಿ ಕಾಯಿದೆ ಅನುಸಾರ 6 ತಿಂಗಳು ಜೈಲು ಮತ್ತು 2 ಸಾವಿರ ರೂ. ದಂಡ ವಿಧಿಸಲಾಗುವುದು.

ನೋಂದಾಯಿತ ರಾಷ್ಟ್ರೀಯ ಅಥವಾ ರಾಜ್ಯದ ಪಕ್ಷಗಳ ಉಮೇದುವಾರರು ಜಾಹೀರಾತು ಪ್ರಕಟವಾಗುವ 3 ದಿನಗಳ ಮುಂಚೆಯೇ ಅನುಮತಿ ಪಡೆಯಬೇಕು. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಎಂಸಿಎಂಸಿಯಿಂದ ಪ್ರಾಮಾಣೀಕರಣದ ಅವಶ್ಯಕತೆಯಿದೆ. ಮತದಾನಕ್ಕಿಂತ ಮೊದಲು 48 ಗಂಟೆಗಳ ಅವಧಿಯಲ್ಲಿ ಮಾತ್ರ ಮುದ್ರಣ ಮಾಧ್ಯಮಕ್ಕೆ ವಿಷಯದ ಪೂರ್ವ ಪ್ರಾಮಾಣೀಕರಣದ ಅವಶ್ಯಕತೆಯಿದೆ. ಮುದ್ರಣ ಕಾನೂನು ಉಲ್ಲಂಘನೆಗೆ ಆರು ತಿಂಗಳ ಸಜೆ ಮತ್ತು 2000 ರೂ. ದಂಡ ವಿಧಿಸಲಾಗುತ್ತದೆ.

error: Content is protected !!