ಬೆಂಗಳೂರು(ಏ.07): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಲ್ಲಾ ತಂಡಗಳಿಗೂ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಆರ್‌ಸಿಬಿ ತಂಡ ಕೂಡಾ ಹೊರತಾಗಿಲ್ಲ. ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲಿ, ಗಾಯದ ಸಮಸ್ಯೆಯಿಂದ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.

ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಇದೀಗ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಎದುರು ಆಘಾತಕಾರಿ ಸೋಲು ಕಂಡಿದೆ.

ಇನ್ನು ಮುಂಬೈ ಎದುರಿನ ಮೊದಲ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿದ್ದ ರೀಸ್ ಟಾಪ್ಲಿ, ಭುಜದ ಗಾಯಕ್ಕೆ ಒಳಗಾಗಿದ್ದು, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಆರ್‌ಸಿಬಿ ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತ್ತು.

ಇದೀಗ ಆರ್‌ಸಿಬಿ ಫ್ರಾಂಚೈಸಿಯು ರೀಸ್ ಟಾಪ್ಲಿ ಬದಲಿಗೆ, ದಕ್ಷಿಣ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಾರ್ನೆಲ್‌ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವುದರ ಜತೆಗೆ ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ವೇಯ್ನ್ ಪಾರ್ನೆಲ್‌ ಈ ಮೊದಲು ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪುಣೆ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದುವರೆಗೂ ಐಪಿಎಲ್‌ನಲ್ಲಿ 26 ಪಂದ್ಯಗಳನ್ನಾಡಿ 26 ವಿಕೆಟ್ ಕಬಳಿಸಿದ್ದಾರೆ.

ವೇಯ್ನ್ ಪಾರ್ನೆಲ್‌, 2014ರಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಕೊನೆಯ ಬಾರಿಗೆ ಐಪಿಎಲ್‌ ಪಂದ್ಯವನ್ನಾಡಿದ್ದರು. ಇನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ ಮಿನಿ ಹರಾಜಿನಲ್ಲಿ 75 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೇಯ್ನ್ ಪಾರ್ನೆಲ್‌ ಅನ್‌ಸೋಲ್ಡ್ ಆಗಿದ್ದರು.

ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಕೆಳಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ವೇಯ್ನ್ ಪಾರ್ನೆಲ್‌, ಆರ್‌ಸಿಬಿ ತಂಡದ ಬಲ ಹೆಚ್ಚಿಸಲಿದ್ದಾರೆ. ಪಾರ್ನೆಲ್‌ ಸೇರ್ಪಡೆ, ಆರ್‌ಸಿಬಿ ಅದೃಷ್ಟ ಬದಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.



error: Content is protected !!