
ಪಾವಗಡ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿ ಬಂಜಾರ, ಕೊರಚ, ಕೊರಮ, ಭೋವಿ ಸಮಾಜದ ಮುಖಂಡರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಶನೈಶ್ಚರ ದೇಗುಲ ವೃತ್ತದಿಂದ ಡಾ.ಬಿ.ಆರ್.
ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ನಡೆಯಿತು.
ಮೊದಲಿನಿಂದಲೂ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ ಮಾಡುತ್ತಾ ಬಂದಿದ್ದೇವೆ. ಆದರೂ, ರಾಜ್ಯ ಸರ್ಕಾರ ತರಾತುರಿಯಿಂದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅವೈಜ್ಞಾನಿಕವಾದ ಈ ವರದಿಯನ್ನು ಇಷ್ಟು ವರ್ಷಗಳ ಕಾಲ ಬಚ್ಚಿಟ್ಟು ಇದೀಗ ಏಕಾಏಕಿ ಚುನಾವಣಾ ವೇಳೆ ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ವರದಿ ಜಾರಿಗೆ ಮುನ್ನಾ ಯಾವುದೇ ಚರ್ಚೆ ನಡೆಸದೆ ಸಚಿವ ಸಂಪುಟದಲ್ಲಿ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇತರೆ ರಾಜ್ಯಗಳಲ್ಲಿ ನೀಡಿದಂತೆ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೂ ನ್ಯಾಯ ಕಲ್ಪಿಸಬೇಕಿತ್ತು, ಆದರೆ, ವಿವಿಧ ಕ್ಷೇತ್ರದಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಅನ್ಯಾಯ ಮಾಡುವ, ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
‘ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದಿಂದ ಹೊರಗಿಡಬಾರದು ಎಂದು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಆದರೆ, ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಸುವ ಅವಶ್ಯಕತೆ ಇದೆ’ ಎಂದು ಎಸ್.ಆರ್. ಪಾಳ್ಯದ ಮುಖಂಡ ಹನುಮಂತರಾಯ ತಿಳಿಸಿದರು.
ಸರ್ಕಾರ ಕೂಡಲೇ ಈ ಶಿಫಾರಸು ವಾಪಸ್ ಪಡೆಯಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ್ ಕೆ.ಎನ್. ಸುಜಾತ ಅವರಿಗೆ ಮನವಿ ಸಲ್ಲಿಸಲಾಯಿತು.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ಉಪಾಧ್ಯಕ್ಷ ಗೋವಿಂದನಾಯ್ಕ, ಪ್ರಧಾನ ಕಾರ್ಯದರ್ಶಿ ರಮೇಶ್ ರಾಥೋಡ್, ತಿಮ್ಮರಾಜು, ರಾಕೇಶ್, ಎಚ್.ವಿ. ರಮೇಶ್, ಕುಮಾರ್, ಶ್ರೀನಿವಾಸ್, ಈರಣ್ಣ, ಮೂರ್ತಿ, ವೀರಭದ್ರಪ್ಪ, ರಾಮಪ್ಪ, ಹನುಮಂತರಾಯಪ್ಪ, ಬಂಗಾರಪ್ಪ, ವೆಂಕಟೇಶ್, ರಮೇಶ್, ಕೃಷ್ಣಾನಾಯ್ಕ ಉಪಸ್ಥಿತರಿದ್ದರು.