ಕೋಪ್ಪಳ: ತೀವ್ರ ಕುತೂಹಲ ಮೂಡಿಸಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಲಾಗಿದ್ದು, ಉಳಿದ ಆಕಾಂಕ್ಷಿಗಳಾದ ಎಚ್.ಆರ್. ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ಅಸಮಾಧಾನಗೊಂಡಿದ್ದಾರೆ.
ಚುನಾವಣೆ ಸಮೀಪಿಸಿದಾಗಿಂದಲೂ ಒಡೆದ ಮನೆಯಂತಾಗಿರುವ ಗಂಗಾವತಿ ಕ್ಷೇತ್ರದಲ್ಲಿ ಶ್ರೀನಾಥ್ ಹಾಗೂ ನಾಗಪ್ಪ ಒಂದಾಗಿ ನಮ್ಮಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಮಾಜಿ ಸಚಿವರೂ ಆದ ಇಕ್ಬಾಲ್ ಅನ್ಸಾರಿ ಟಿಕೆಟ್ ತಂದು ತೋರಿಸುತ್ತೇನೆ ಎಂದು ಸವಾಲು ಹಾಕಿದ್ದರು. ಈಗ ಪಕ್ಷ ಅವರನ್ನು ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಇದರಿಂದ ಅಸಮಾಧಾನಗೊಂಡಿರುವ ಮಲ್ಲಿಕಾರ್ಜುನ ನಾಗಪ್ಪ ‘ಟಿಕೆಟ್ ಈಗ ತಾನೆ ಪ್ರಕಟವಾಗಿದೆ. ಮುಂದಿನ ಬೆಳವಣಿಗೆ ನೋಡಿಕೊಂಡು ಪ್ರತಿಕ್ರಿಯೆ ನೀಡುವೆ’ ಎಂದರು.
ಜೆಡಿಎಸ್‌ನಲ್ಲಿದ್ದು ಹತ್ತು ತಿಂಗಳ ಹಿಂದೆ ಕಾಂಗ್ರೆಸ್ ಸೇರಿರುವ ಶ್ರೀನಾಥ್ ‘ಅನ್ಸಾರಿಗೆ ಟಿಕೆಟ್ ನೀಡಿದ್ದರಿಂದ ಬಹಳಷ್ಟು ಅಸಮಾಧಾನವಾಗಿದೆ. ಕ್ಷೇತ್ರದಲ್ಲಿ ಪಕ್ಷದ ವರಿಷ್ಠರು ಪಡೆದಿದ್ದ ವರದಿಯಲ್ಲಿ ನನ್ನ ಪರವಾದ ಶಿಫಾರಸು ಇತ್ತು. ಅನ್ಸಾರಿಗೆ ಹೇಗೆ ಟಿಕೆಟ್ ಕೊಟ್ಟರು ಎನ್ನುವುದು ಗೊತ್ತಿಲ್ಲ.’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದೆ. ಅವರ ಸಮ್ಮುಖ ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದೆ ಏನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇನೆ ಎಂದು ಕಾಲಚಕ್ರ ವಾಹಿನಿ ಗೆ ಶ್ರೀನಾಥ್ ಪ್ರತಿಕ್ರಿಯಿಸಿದರು.
ಮೊದಲ ಪಟ್ಟಿಯಲ್ಲಿ ಕೊಪ್ಪಳದಿಂದ ಕೆ. ರಾಘವೇಂದ್ರ ಹಿಟ್ನಾಳ, ಯಲಬುರ್ಗಾದಿಂದ ಬಸವರಾಜ ರಾಯರಡ್ಡಿ, ಕುಷ್ಟಗಿಯಿಂದ ಅಮರೇಗೌಡ ಬಯ್ಯಾಪುರ ಮತ್ತು ಕನಕಗಿರಿ ಮೀಸಲು ಕ್ಷೇತ್ರದಿಂದ ಶಿವರಾಜ ತಂಗಡಗಿ ಅವರಿಗೆ ಈಗಾಗಲೇ ಟಿಕಟ್ ಘೋಷಿಸಲಾಗಿದೆ. ಈಗ ಎಲ್ಲಾ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದಂತಾಗಿದೆ.