
ಬೆಂಗಳೂರು:ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಬೇಸಿಗೆಯ ಬಿಸಿಲಿನ ಬೇಗೆ ಜನರನ್ನು ಬಸವಳಿಯುವಂತೆ ಮಾಡಿದೆ. ಏಪ್ರಿಲ್, ಮೇ ತಿಂಗಳಲ್ಲಿ ಸೆಖೆಯ ಪ್ರಮಾಣ ಹೆಚ್ಚಾಗುವುದು ಸಾಮಾನ್ಯವಾಗಿದ್ದು, ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಮತ್ತು ಬಿಸಿಗಾಳಿಯ ಪರಿಣಾಮದಿಂದ ಸೆಖೆ ಹೆಚ್ಚಾಗಿದೆ.
ಹಗಲು ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದ ರಿಂದ ಜನರು ಹೈರಾಣಾಗಿದ್ದಾರೆ. ಎಳನೀರು, ಮಜ್ಜಿಗೆ, ಹಣ್ಣು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬೇಸಿಗೆ ಮಳೆಯಾದರೂ ವಾತಾವರಣ ತಂಪಾಗುತ್ತಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ 34ಡಿ.ಸೆ.ಗಿಂತ ಹೆಚ್ಚಾಗಿದೆ. ಕನಿಷ್ಠ ತಾಪಮಾನವೂ ಹೆಚ್ಚಾಗಿದ್ದು, 20 ಡಿ.ಸೆ. ಗಡಿ ದಾಟಿದೆ. ಅಲ್ಲದೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಬೆಂಗಳೂರಿನಲ್ಲೂ ಬಡಾವಣೆಯಿಂದ ಬಡಾವಣೆಗೆ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕಾಂಕ್ರೀಟ್ ಕಟ್ಟಡ, ಸಿಮೆಂಟ್-ಡಾಂಬರಿನ ರಸ್ತೆ ನಿರ್ಮಾಣ, ಕಟ್ಟಡಗಳ ಹೊರಭಾಗದಲ್ಲಿ ಗಾಜುಗಳ ಅಳವಡಿಕೆ ಸೇರಿದಂತೆ ನಾನಾ ಕಾರಣಗಳಿಂದ ತಾಪಮಾನ ಹೆಚ್ಚಾಗಲಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ.
ಅಲ್ಲದೆ, ಕೆರೆ, ಕಟ್ಟೆಗಳನ್ನು ಮುಚ್ಚಿ ನೀರು ನಿಲ್ಲದಂತೆ ಮಾಡಿರುವುದು. ತಂಪು ನೀಡುವ ಮರ ಗಿಡಗಳನ್ನು ಅಭಿವೃದ್ಧಿ ಹೆಸರಲ್ಲಿ ಕಡಿದು ಹಾಕುವುದು ಕೂಡ ಪರೋಕ್ಷವಾಗಿ ತಾಪಮಾನ ಏರಿಕೆಗೆ ಕಾರಣವಾಗಿದೆ.
ಈಗಾಗಲೇ ಹಲವು ಕಾರಣಗಳಿಂದ ತಾಪಮಾನ ಸರಾಸರಿಗಿಂತ 1-1.5ಡಿ.ಸೆ.ನಷ್ಟು ಉಷ್ಣಾಂಶ ಹೆಚ್ಚಳ ವಾಗಿದೆ ಎಂದು ಕರ್ನಾಟಕ ರಾಜ್ಯನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯ ಉಷ್ಣಾಂಶದಲ್ಲೂ ಹೆಚ್ಚಳವಾಗಿದೆ. ಇದರಿಂದ ಸೆಖೆಯ ಪ್ರಮಾಣ ಹೆಚ್ಚಳವಾಗಿದೆ. ವಾಸ್ತವಿಕ ತಾಪಮಾನವೇ ಬೇರೆ. ತಾಪಮಾನದ ಅನುಭವವೇ ಬೇರೆ. ಅಂದರೆ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34-35ಡಿ.ಸೆ.ಇದ್ದರೆ, 38 ಡಿ.ಸೆ.ನಷ್ಟು ಅನುಭವವಾಗುತ್ತದೆ ಎಂದು ಹೇಳಿದರು.
ಬೇಸಿಗೆ ಕಾಲವಾಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನವು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಬಿಸಿಲಿನ ಝಳಕ್ಕೆ ಗಾಳಿಯು ಕಾಯುತ್ತದೆ. ಹೀಗಾಗಿ ಮೇ.15ರವರೆಗೂ ಬಿಸಿಗಾಳಿಯ ಅನುಭವ ಇರುತ್ತದೆ. ಹವಾಮಾನ ಇಲಾಖೆಯು ಸಹ ಬಿಸಿಗಾಳಿಯ ಬಗ್ಗೆ ಮುನ್ಸೂಚನೆ ನೀಡಿದೆ ಎಂದರು.
ಒಂದೆರಡು ಕಡೆ ಚದುರಿದಂತೆ ಪೂರ್ವ ಮುಂಗಾರು ಮಳೆಯಾದರೂ ಎಲ್ಲಾ ಭಾಗಗಳಲ್ಲಿ ವಾತಾವರಣ ತಂಪಾಗುವುದಿಲ್ಲ. ಮಳೆಯೂ ಕೂಡ ವ್ಯಾಪಕವಾಗಿ ಎಲ್ಲಾ ಕಡೆಗಳಲ್ಲಿ ಆಗುವುದಿಲ್ಲ. ಮಳೆಯಾದ ಪ್ರದೇಶದಲ್ಲಿ ಆ ಸಂದರ್ಭದಲ್ಲಿ ಮಾತ್ರ ತಂಪಾದ ವಾತಾವರಣ ಕಂಡುಬರಲಿದೆ ಎಂದು ವಿವರಿಸಿದರು.
ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಿರಲಿದೆ. ಆ ಭಾಗದಲ್ಲಿ ಬಿಸಿಲಿನ ತೀವ್ರತೆಯೂ ಹೆಚ್ಚಾಗಿರುತ್ತದೆ. ಜನರು ಆದಷ್ಟೂ ಛತ್ರಿ ಮೊದಲಾದವುಗಳ ಮೂಲಕ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.