ಕಾರಟಗಿ (ಕೊಪ್ಪಳ ಜಿಲ್ಲೆ):ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿಯವರು ಶುಭ ಕಾರ್ಯಕ್ರಮ ದೋತರದಟ್ಟಿ ಹೆಸರಲ್ಲಿ ಮತದಾರರನ್ನು ಸೆಳೆಯಲು ಬಾಡೂಟದ ವ್ಯವಸ್ಥೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಜರುಗಿದೆ.

ಹಾಲಿ ಶಾಸಕ ಬಸವರಾಜ ದಢೇಸೂಗೂರು ಅವರ ಆಪ್ತ, ಬಿಜೆಪಿ ಮುಖಂಡ ಕಾಶಿವಿಶ್ವನಾಥ ಬಿಚ್ಚಾಲಿಯವರ ಪುತ್ರ ಬಿ. ವಿನಯಕುಮಾರ ದೋತರದಟ್ಟಿ ಕಾರ್ಯಕ್ರಮವಿದ್ದು, 500 ಜನರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಅನುಮತಿ ಪಡೆದಿದ್ದರು. ಇಲ್ಲಿನ 20ನೇ ವಾರ್ಡ್‌ನ ತಮ್ಮ ನಿವಾಸದ ಹಿಂಭಾಗದ ತಿಮ್ಮನಗೌಡರ ಲೇಔಟ್‌ನಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದರು. ಕ್ಷೇತ್ರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬಾಡೂಟ ಸವಿಯಲು ಆಗಮಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ, ಭಾವಚಿತ್ರ, ವಿಡಿಯೊ ತೆಗೆಯುತ್ತಿದ್ದಂತೆಯೇ ಬಾಡೂಟಕ್ಕೆ ಆಗಮಿಸಿದವರು ಜಾಗೆ ಖಾಲಿ ಮಾಡಲಾರಂಭಿಸಿದರು. ಜನರಿಗೆ ಸಿದ್ದಪಡಿಸಿದ್ದ ಬಾಡೂಟದಲ್ಲಿ ಒಂದಷ್ಟು ಬೇರೆಡೆ ಸ್ಥಳಾಂತರಿಸಿದರೆ, ಇನ್ನುಳಿದಿದ್ದನ್ನು ನೆರೆದವರು ಬೇರೆಡೆ ಊಟ ಮಾಡಲು ತಗೆದುಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಚುನಾವಣಾ ಅಧಿಕಾರಿಗಳು ಬಂದ ಕೆಲ ಹೊತ್ತಿನಲ್ಲಿಯೇ ಸಾವಿರಾರು ಜನರಿಂದ ತುಂಬಿದ್ದ ಅಲ್ಲಿನ ಸ್ಥಳ ಕೆಲ ಹೊತ್ತಿನಲ್ಲಿಯೇ ನಿರ್ಜನವಾಯಿತು.

ಈ ಕುರಿತು ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಮೀರ್‌ ಮಲ್ಲಾ ಪ್ರತಿಕ್ರಿಯಿಸಿ ಶುಭ ಕಾರ್ಯಕ್ಕೆಂದು ಅನುಮತಿ ಪಡೆದವರು ಜನರನ್ನು ಆಕರ್ಷಿಸಲು ಬಾಡೂಟದ ವ್ಯವಸ್ಥೆ ಮಾಡಿರುವುದು ಗಮನಕ್ಕೆ ಬಂದಿದೆ. ಬಾಡೂಟದ ವ್ಯವಸ್ಥೆಯನ್ನು ಬಂದ್‌ ಮಾಡಿಸಿದ್ದು, ಅನುಮತಿ ಪಡೆದವರೂ ಸೇರಿದಂತೆ ಇತರರ ಮೇಲೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿದ್ರಾಮಯ್ಯಸ್ವಾಮಿ ಬಿ. ಎಂ. ಪ್ರತಿಕ್ರಿಯಿಸಿ ಚುನಾವಣಾ ಅಧಿಕಾರಿಗಳೊಂದಿಗೆ ನಮ್ಮವರೂ ಸ್ಥಳಕ್ಕೆ ತೆರಳಿ ಬಾಡೂಟ ಸ್ಥಗಿತಗೊಳಿಸಿದ್ದಾರೆ. ಜನರನ್ನು ಆಕರ್ಷಿಸಲು ಬಾಡೂಟದ ವ್ಯವಸ್ಥೆಯನ್ನು ಮಾಡಿದ್ದು, ಸಂಬಂಧಿಸಿದವರೆಲ್ಲರ ಮೇಲೆ ದೂರು ದಾಖಲಾಗಿದೆ ಎಂದರು.

error: Content is protected !!