
ಕೇಂದ್ರದ ಕಾಯಕಲ್ಪ ಪ್ರಶಸ್ತಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಗಂಗಾವತಿ ಸರ್ಕಾರಿ ಆಸ್ಪತ್ರೆ ದಾಖಲೆ ನಿರ್ಮಿಸಿದೆ.
ಗಂಗಾವತಿ (ಕೊಪ್ಪಳ) : ಬಡ ರೋಗಿಗಳಿಗೆ ನೀಡಲಾಗುವ ಗುಣಮಟ್ಟದ ಚಿಕಿತ್ಸೆ, ಜನಸ್ನೇಹಿ ವಾತಾವರಣ ಮತ್ತು ಸ್ವಚ್ಛತೆಯಂತ ಮಾನದಂಡಕ್ಕಾಗಿ ಕೇಂದ್ರ ಸರ್ಕಾರದಿಂದ ಕಾಯಕಲ್ಪ ಪ್ರಶಸ್ತಿ ನೀಡಲಾಗುತ್ತದೆ.
ಈ ಪ್ರಶಸ್ತಿಗೆ ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಆರೋಗ್ಯ ಇಲಾಖೆಯ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. 15 ಲಕ್ಷ ರೂಪಾಯಿ ಮೊತ್ತದ ನಗದು ಪುರಸ್ಕಾರ ಒಳಗೊಂಡಿದೆ. ಆರೋಗ್ಯ ಇಲಾಖೆಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಕೇಂದ್ರದ ಕಾಯಕಲ್ಪ ಪ್ರಶಸ್ತಿಯನ್ನು ಗಂಗಾವತಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವುಡಿ ಅವರಿಗೆ ಇಲಾಖೆಯ ಅಧಿಕಾರಿಗಳು ನೀಡಿದರು.
ಸಹಜ ಹೆರಿಗೆಯಲ್ಲಿ ದಾಖಲೆ ಬರೆದ ಆಸ್ಪತ್ರೆ : ಗಂಗಾವತಿಯ ಉಪ ವಿಭಾಗ ಆಸ್ಪತ್ರೆ ಕೇವಲ ಹೆಸರಿಗೆ 30 ಬೆಡ್ ಆಸ್ಪತ್ರೆಯಾಗಿದ್ದರೂ, ಆಸ್ಪತ್ರೆಯಲ್ಲಿ ನೂರಕ್ಕೂ ಹೆಚ್ಚು ರೋಗಿಗಳು, ಒಳರೋಗಿಗಳಾಗಿ ದಾಖಲಾಗುತ್ತಾರೆ. ದಿನಕ್ಕೆ 500ರಿಂದ 700ರಷ್ಟು ಪ್ರಮಾಣದ ರೋಗಿಗಳು ಒಪಿಡಿಯಲ್ಲಿ (ಹೊರರೋಗಿ ವಿಭಾಗ) ಚಿಕಿತ್ಸೆ ಪಡೆಯುತ್ತಾರೆ. ತಿಂಗಳಿಗೆ 800ರಿಂದ 900ಕ್ಕೂ ಹೆಚ್ಚು ಅದೂ ಶೇ.90ರಷ್ಟು ಸಹಜ ಹೆರಿಗೆ ಮಾಡಿಸುವ ಮೂಲಕ ಇಲ್ಲಿನ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ಇದು ಆರೋಗ್ಯ ಇಲಾಖೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಮಾಡಿಸುವ ಹೆರಿಗೆಯಲ್ಲಿ ದಾಖಲೆ ನಿರ್ಮಾಣ ಮಾಡಿದೆ.
ಇಲ್ಲಿನ ಆಸ್ಪತೆಯಲ್ಲಿ ಜನರಿಗೆ ನೀಡಲಾಗುತ್ತಿರುವ ಗುಣಮಟ್ಟ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆಯಿಂದಾಗಿ ಇಡೀ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಇದೇ ಕಾರಣಕ್ಕೆ ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ಕೇವಲ ಕೊಪ್ಪಳ ಮಾತ್ರವಲ್ಲದೆ, ನೆರೆ ಹೊರೆಯ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ಈ ಕುರಿತು ಮಾತನಾಡಿದ ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಈಶ್ವರ ಸವುಡಿ ಅವರು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಮೂಹಿಕವಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಇದರಿಂದ ನಮಗೆ ಈ ಪ್ರಶಸ್ತಿ ಸತತ ಮೂರನೇ ಬಾರಿಗೆ ಲಭಿಸಿದೆ ಎಂದು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದರು.
ಮೂರು ಹಂತದಲ್ಲಿ ಸಮೀಕ್ಷೆ : ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಡಿ ನಿರ್ವಹಿಸಲಾಗುತ್ತಿರುವ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಲು ಮೂರು ಹಂತದ ಸಮೀಕ್ಷೆ ಮಾಡಲಾಗುತ್ತಿದೆ. ಮೊದಲ ಹಂತ ಜಿಲ್ಲಾಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆ. ಬಳಿಕ ಎರಡನೇ ಸಮೀಕ್ಷೆ ರಾಜ್ಯಮಟ್ಟದ ತಂಡದಿಂದ ಮಾಡಲಾಗುತ್ತದೆ. ಕಾಯಕಲ್ಪ ಪ್ರಶಸ್ತಿಗೆ ರಾಜ್ಯದಿಂದ ಶಿಫಾರಸು ಮಾಡುವ ತಂಡ ಈ ಸಮೀಕ್ಷೆ ಮಾಡಿ ವರದಿಯನ್ನು ಕೇಂದ್ರಕ್ಕೆ ಕಳಿಹಿಸಿಕೊಡುತ್ತದೆ. ಬಳಿಕ ಕೇಂದ್ರದ ತಂಡ ಆಗಮಿಸಿ ಸಮೀಕ್ಷೆ ಮಾಡುತ್ತಿದೆ ಎಂದು ಡಾ. ಈಶ್ವರ ಸವುಡಿ ಅವರು ತಿಳಿಸಿದರು.
ಹದಿನೈದು ಲಕ್ಷ ನಗದು : ಪ್ರಶಸ್ತಿಗೆ ಆಯ್ಕೆಯಾಗಿ ಅಂತಿಮ ಸುತ್ತಿನಲ್ಲಿರುವ ಐದು ಆಸ್ಪತ್ರೆಗಳ ಪೈಕಿ ಮೊದಲ ಮೂರು ಸ್ಥಾನದಲ್ಲಿರುವ ಆಸ್ಪತ್ರೆಗಳನ್ನು ಕ್ರಮವಾಗಿ ಮೊದಲು, ಎರಡು ಮತ್ತು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡುತ್ತದೆ. ಪ್ರತಿ ಹಂತದಲ್ಲಿ ಅಂಕಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಮೊದಲ ಸ್ಥಾನ ಪಡೆದ ಆಸ್ಪತ್ರೆಗೆ 15 ಲಕ್ಷ ಮೊತ್ತದ ನಗದು ಪುರಸ್ಕಾರ, ಎರಡನೇ ಸ್ಥಾನದ ಆಸ್ಪತ್ರೆಗೆ (ಬಸವನಬಾಗೇವಾಡಿ ತಾಲ್ಲೂಕು ಆಸ್ಪತ್ರೆ) 10 ಲಕ್ಷ ರೂಪಾಯಿ ನಗದು ಮತ್ತು ಮೂರನೇ ಸ್ಥಾನ ಪಡೆಯುವ ಆಸ್ಪತ್ರೆಗೆ 5 ಲಕ್ಷ ಮೊತ್ತದ ನಗದು ಪುರಸ್ಕಾರ ಸಿಗುತ್ತದೆ ಎಂದು ಹೇಳಿದರು.