ಕೊಪ್ಪಳ: ಹಿಂಗಾರಿನಲ್ಲಿ ಮಾವಿನ ನಿರ್ವಹಣೆ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಜಿಲ್ಲೆಯ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಇತ್ತೀಚೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ ರವಿ, ಸಹಾಯಕ ಪ್ರಾಧ್ಯಾಪಕರಾದ ಡಾ ನಾಗೇಶ ಹಾಗೂ ವಾಮನಮೂರ್ತಿ ಪುರೋಹಿತ ಅವರು ಕೊಪ್ಪಳ ತಾಲ್ಲೂಕಿನ ವಿವಿಧ ಮಾವಿನ ತೋಟಗಳಿಗೆ ಭೇಟಿ ನೀಡಿ ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ.

ಈಗಿನ ದಿನಗಳಲ್ಲಿ ಬೆಳಗಿನ ತಾಪಮಾನ ಅತೀ ಕಡಿಮೆಯಾಗಿದ್ದು, ಮಧ್ಯಾಹ್ನ ಹೆಚ್ಚಿನ ತಾಪಮಾನದಿಂದ ಕೂಡಿರುತ್ತದೆ. ಇದರಿಂದಾಗಿ ಮಾವಿನಲ್ಲಿ ಅನೇಕ ಕೀಟ-ರೋಗಗಳು ಕಾಣಿಸಿಕೊಂಡಿರುತ್ತವೆ. ಈಗ ಹೂ ಮತ್ತು ಕಾಯಿ ಕಚ್ಚುವ ಹಂತದಲ್ಲಿದ್ದು, ಪ್ರಮುಖ ಕೀಟಗಳಾದ ಜಿಗಿ ಹುಳು, ಜೇಡ ಅಲ್ಲದೇ ಇತರೆ ರಸಹೀರುವ ಕೀಟಗಳು ಕಂಡುಬಂದಿರುತ್ತವೆ. ಇದಲ್ಲದೇ, ಅಂಗಮಾರಿ ರೋಗದ ಬಾಧೆ ಅಲ್ಲಲ್ಲಿ ಕಾಣಿಸಿದ್ದು, ಈಚುಗಳು ಉದುರುತ್ತಿವೆ.

ನಿರ್ವಹಣಾ ಕ್ರಮಗಳು : ಮಧ್ಯಾಹ್ನದ ತಾಪಮಾನ ಹೆಚ್ಚಾಗಿರುವುದರಿಂದ ರೈತರು ಮಾವಿನ ಗಿಡಗಳಿಗೆ ನಿಯಮಿತವಾಗಿ ನೀರು ಕೊಡಬೇಕು. ಗಿಡದ ಸುತ್ತಲೂ ಪಾತಿ ಮಾಡಿ ಮಣ್ಣನ್ನು ಸಡಿಲಗೊಳಿಸಿ, ಹನಿ ನೀರಾವರಿ-ಪ್ರತಿ ದಿನ 3 ರಿಂದ 4 ಗಂಟೆಗಳ ಕಾಲ ನೀರುಣಿಸಬೇಕು. ಹರಿ ನೀರಾವರಿ ಇದ್ದಲ್ಲಿ ವಾರದಲ್ಲಿ 2 ಬಾರಿ ಪಾತಿ ತುಂಬುವಂತೆ ನೀರುಣಿಸಬೇಕು.

ಸಿ.ಓ.ಸಿ. ಎಂಬ ರಾಸಾಯನಿಕವನ್ನು 50 ಗ್ರಾಂ ನಷ್ಟು ಒಂದು ಲೀಟರ್ ನೀರಿನಲ್ಲಿ ಬೆರೆಸಿ ನೆಲದಿಂದ 3 ಅಡಿಗಳ ಅಂತರದಲ್ಲಿ ಕಾಂಡಕ್ಕೆ ಲೇಪನ ಮಾಡಬೇಕು. ಇದರಿಂದ ಗೆದ್ದಲು ಹುಳು, ಇನ್ನಿತರೆ ರಸಹೀರುವ ಕೀಟಗಳ ಹತೋಟಿಯಾಗುವುದಲ್ಲದೇ ಹೆಚ್ಚಿನ ತಾಪಮಾನದಿಂದಾಗಿ ಕಾಂಡಕ್ಕೆ ಆಗುವ ಹಾನಿಯನ್ನು ತಡೆಗಟ್ಟಬಹುದಾಗಿದೆ. ಕೆಂಪು ಮಸಾರೆ ಜಮೀನಿನಲ್ಲಿ ಸುಣ್ಣದ ನೀರನ್ನು ಕೊಡುವುದರ ಮೂಲಕ ಅನೇಕ ಕೀಟ ರೋಗ ಬಾಧೆಗಳನ್ನು ತಡೆಗಟ್ಟಬಹುದು.

ಜಿಗಿ ಹುಳು ನಿಯಂತ್ರಣಕ್ಕೆ : ಲ್ಯಾಂಬ್ಡಾಸಹಿಲೋಥ್ರಿನ್ ಶೇಕಡ 5ರ ಕೀಟನಾಶಕವನ್ನು ಅಥವಾ ಬೇವಿನ ಎಣ್ಣೆ 2 ಮಿಲಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಹೆಚ್ಚಿನ ಹಾವಳಿ ಕಂಡುಬಂದಲ್ಲಿ ಬುಪ್ರೋಫಿಜಿನ್ 1 ಎಂ.ಎಲ್ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಳದಿ ಅಂಟು ಕಾರ್ಡುಗಳನ್ನು ಪ್ರತಿ ಗಿಡಕ್ಕೆ 2 ರಂತೆ ಅಳವಡಿಸಬೇಕು.

ರೋಗದ ಲಕ್ಷಣಗಳು ಕಂಡುಬಂದಲ್ಲಿ ಮೇಲಿನ ಕೀಟನಾಶಕಗಳ ಜೊತೆಗೆ ‘ಸಾಫ್’ ಎನ್ನುವ ಸಂಯುಕ್ತ ಶಿಲೀಂಧ್ರನಾಶಕ-2 ಗ್ರಾಂ ಅಥವಾ ಥಯೋಫಿನೈಟ್ ಮಿಥೈಲ್ ಒಂದು ಗ್ರಾಂ ನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರ ಜೊತೆಗೆ ಮನೆಯಲ್ಲೇ ತಯಾರಿಸಿದ ಹುಳಿ ಮಜ್ಜಿಗೆ ದ್ರಾವಣ (ಗೋ ಕೃಪಾಮೃತ) ವನ್ನು ಕೂಡ ಬಳಸಬಹುದಾಗಿದೆ.

ಮುಂದೆ ಬರುವ ಹಣ್ಣಿನ ನೊಣದ ಬಾಧೆಯ ಹತೋಟಿಗಾಗಿ ಎಕರೆಗೆ 10 ರಂತೆ ಮಿಥೈಲ್ ಯುಜಿನಾಲ್ ದ್ರಾವಣಯುಕ್ತ ಮೋಹಕ ಬಲೆಗಳನ್ನು ಅಳವಡಿಸಬೇಕು. ಓಟೆ ಕೊರಕದ ನಿಯಂತ್ರಣಕ್ಕಾಗಿ ಅಸಿಫೇಟ್ 75 ಎಸ್.ಪಿ. ಅಥವಾ ಡೆಲ್ಟಾಮೆಥ್ರಿನ್ 2.8 ಇ.ಸಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲ್ಲಕ್ಕೂ ಮುಖ್ಯವಾಗಿ ತೋಟವನ್ನು ಕಸ ಮುಕ್ತವಾಗಿಡಬೇಕು.

ಪೋಷಕಾಂಶಗಳ ನಿರ್ವಹಣೆಗಾಗಿ ಮಾವು ಸ್ಪೆಷಲ್ 5 ಗ್ರಾಂ ಮತ್ತು ಪೊಟ್ಯಾಷಿಯಂ ನೈಟ್ರೇಟ್ (13-0-45) ನ್ನು 5 ಗ್ರಾಂ ನಂತೆ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮಾವಿನ ಗಿಡಗಳ ಮಧ್ಯೆ ಗಾಳಿ ಮತ್ತು ಬೆಳಕು ಸರಾಗವಾಗಿ ಆಡುವಂತೆ ಗಿಡಗಳನ್ನು ಸವರಬೇಕು. ಎಕರೆಗೆ 4 ರಂತೆ ಜೇನು ಪೆಟ್ಟಿಗೆಗಳನ್ನು ಅಳವಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಜೇನು ಪೆಟ್ಟಿಗಳನ್ನು ಅಳವಡಿಸಿದಾಗ ರಾಸಾಯನಿಕಗಳ ಬಳಕೆ ಮಾಡಬಾರದು.

ಈ ರೀತಿಯಾಗಿ ನಿರ್ವಹಣೆ ಮಾಡುವುದರ ಮೂಲಕ ಉತ್ತಮ ಇಳುವರಿ ಮತ್ತು ಆದಾಯವನ್ನು ಪಡೆಯಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಮಾಹಿತಿ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ ರವಿ ಮೊಸಂ: 9480696319, ಸಹಾಯಕ ಪ್ರಾಧ್ಯಾಪಕರಾದ ಡಾ ನಾಗೇಶ ಮೊ.ಸಂ: 8971814940, ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಪುರೋಹಿತ ಮೊ.ಸಂ: 9482672039 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!