ಬೆಂಗಳೂರು: ನ್ಯಾಯದಾನದ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಹೈಕೋರ್ಟ್‌ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಹೈಕೋರ್ಟ್‌ ತೀರ್ಪುಗಳು ಕನ್ನಡ ಭಾಷೆಯಲ್ಲಿ ಸಿಗುವ ವ್ಯವಸ್ಥೆ ಜಾರಿಗೆ ತರುತ್ತಿದೆ.

ಕನ್ನಡ ಸೇರಿ ದೇಶದ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಪುಗಳು ಲಭ್ಯವಾಗುವ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್‌ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಇದರಿಂದ ಕೋರ್ಟ್‌ ಭಾಷೆ “ಕಬ್ಬಿಣದ ಕಡಲೆ’ ಎಂಬ ಕಾಲ ದೂರವಾಗಲಿದೆ. ತನ್ಮೂಲಕ ಇನ್ನೂ ಮುಂದೆ ಹೈಕೋರ್ಟ್‌ ತೀರ್ಪುಗಳು ಸಾಮಾನ್ಯ ಜನರಿಗೂ ಕನ್ನಡದಲ್ಲಿ ಲಭ್ಯವಾಗಲಿವೆ.

ಆಂಗ್ಲ ಭಾಷೆಯಲ್ಲಿರುವ ಕರ್ನಾಟಕ ಹೈಕೋರ್ಟ್‌ ತೀರ್ಪುಗಳನ್ನು “ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ) ಬಳಸಿ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಿದ್ದು, ಈ ವಿಚಾರವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಸಿ.ಎಂ. ಜೋಶಿ ಅವರ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.

ಕಳೆದ ತಿಂಗಳು ಸಲಹಾ ಸಮಿತಿ ರಚಿಸಲಾಗಿದೆ. ಸಮಿತಿಯು ಈಗಾಗಲೇ ಸಭೆ ನಡೆಸಿದೆ. ಕೃತಕ ಬುದ್ದಿಮತ್ತೆ ನೆರವಿನಿಂದ ಇಂಗ್ಲಿಷ್‌ನಲ್ಲಿರುವ ತೀರ್ಪುಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಉದ್ದೇಶಿಸಲಾಗಿದೆ. ಹೈಕೋರ್ಟ್‌ ತೀರ್ಪುಗಳಲ್ಲಿ ಉಲ್ಲೇಖೀಸಲಾಗುವ ಆಂಗ್ಲ ಭಾಷೆಯ ಕಾನೂನು ಪದಗಳಿಗೆ ಸಮಾನ ಅರ್ಥ ಕೊಡುವಂತಹ ಕನ್ನಡ ಭಾಷೆಯ ಶಬ್ದಕೋಶವನ್ನು ಸಮಿತಿ ತಯಾರಿಸುತ್ತಿದೆ.

ಆಂಗ್ಲ ಭಾಷೆಯಲ್ಲಿರುವ ಹೈಕೋರ್ಟ್‌ ತೀರ್ಪನ್ನು ಕೃತಕ ಬುದ್ದಿಮತ್ತೆ ಸಾಫ್ಟ್ವೇರ್‌ಗೆ ಹಾಕಿದರೆ ಅದು ತನ್ನಿಂತಾನೆ ಕನ್ನಡ ಭಾಷೆಗೆ ಅನುವಾದಿಸುತ್ತದೆ. ಈ ಮೂಲಕ ಸಾಮಾನ್ಯ ಜನರಿಗೂ ಹೈಕೋರ್ಟ್‌ ತೀರ್ಪುಗಳು ಕನ್ನಡ ಭಾಷೆಯಲ್ಲಿ ಓದಲು ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಹೈಕೋರ್ಟ್‌ನಲ್ಲಿ ಲಭ್ಯವಿರುವ ಕಂಪ್ಯೂಟರ್‌ಗಳಲ್ಲಿ “ಸುವಾಸ್‌’ (ಸುಪ್ರೀಂ ಕೋರ್ಟ್‌ ವಿಧಿಕ್‌ ಅನುವಾದ್‌ ಸಾಫ್ಟ್ವೇರ್‌) ತಂತ್ರಾಂಶವನ್ನು ಅಳವಡಿಸಿ, ತೀರ್ಪುಗಳನ್ನು ಅನುವಾದ ಮಾಡಲು ಈಗಾಗಲೇ ಅನುವಾದಕರನ್ನು ನಿಯೋಜಿಸಲಾಗಿದೆ. ಅನುವಾದಕರಿಗೆ ಬುದ್ಧಿಮತ್ತೆ ತಜ್ಞರು ತರಬೇತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುವಾಸ್‌ನಲ್ಲಿ ಕನ್ನಡದ ಪದಗಳನ್ನು ಸೇರಿಸುವ ಕೆಲಸ ನಡೆಯುತ್ತಿದೆ. ಇದು ಆರಂಭಿಕ ಹಂತದಲ್ಲಿದೆ ಎಂದು ಹೈಕೋರ್ಟ್‌ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಎನ್‌.ಜಿ. ದಿನೇಶ್‌ ಮಾಹಿತಿ ನೀಡಿದ್ದಾರೆ.

error: Content is protected !!