
ಬೆಂಗಳೂರು: ಕರ್ನಾಟಕದ ವಿಚಾರದಲ್ಲಿ ಸುಳ್ಳು ಹೇಳಿರುವ ಮೋದಿಯವರು ಜನರ ಕ್ಷಮೆ ಕೇಳಬೇಕು. ರಾಜ್ಯದ ಪಾಲಿನ ಅನುದಾನಗಳನ್ನು ನ್ಯಾಯಯುತವಾಗಿ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ದೇಶದ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ.
ನಮ್ಮ ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ, ಕೋವಿಡ್ ನಂತಹ ಮಾರಕ ಕಾಯಿಲೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಾನು ಮೋದಿಯವರು ರಾಜ್ಯಕ್ಕೆ ಬಂದಾಗಲೆಲ್ಲ ಕರ್ನಾಟಕದ ಜನರಿಂದ ಲೂಟಿಯ ರೀತಿಯಲ್ಲಿ ಸಂಗ್ರಹಿಸುತ್ತಿರುವ ತೆರಿಗೆ, ಮೇಲ್ತೆರಿಗೆಗಳಲ್ಲಿ ರಾಜ್ಯಕ್ಕೆ ನ್ಯಾಯವಾದ ಪಾಲು ಕೊಡದೆ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸುತ್ತಲೆ ಇದ್ದೇನೆ ಎಂದಿದ್ದಾರೆ.
ಎಂದೂ ಉಸಿರೆ ಬಿಡದಿದ್ದ ಮೋದಿಯವರು ಇತ್ತೀಚೆಗೆ ನವದೆಹಲಿಯ ಕರ್ನಾಟಕ ಭವನದ ಅಮೃತ ಮಹೋತ್ಸಹ ಹಾಗೂ ಬಾರಿಸು ಕನ್ನಡ ಡಿಂಡಿಮವ ಎಂಬ ಕಾರ್ಯಕ್ರಮದಲ್ಲಿ ತಾವು ಕರ್ನಾಟಕದ ರೈಲ್ವೆಗೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನಗಳನ್ನು ಕೊಟ್ಟಿದ್ದೇವೆ ಹಾಗೂ ಅನುದಾನಗಳನ್ನು ಹೆಚ್ಚಿಸಿದ್ದೇವೆ, ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಎಷ್ಟೊ ಪಾಲು ಹೆಚ್ಚು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಮೋದಿಯವರು ಎಲ್ಲ ಕಡೆ ಹೇಳುವ ಹಾಗೆ ನಮ್ಮ ರಾಜ್ಯದ ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬುದ್ಧಿವಂತರೆನ್ನಿಸಿಕೊಂಡ ಜನರಿದ್ದಾರೆ, ಅವರು ದಾಖಲೆಗಳನ್ನು ಆಧರಿಸಿ ಮಾತನಾಡುತ್ತಾರೆ ಎಂಬುದನ್ನೂ ಮರೆತು ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.