
ಹುಬ್ಬಳ್ಳಿ, ಫೆಬ್ರವರಿ, 26: ಮಠಾಧೀಶರು ರಾಜಕಾರಣಕ್ಕೆ ಬರೋದು, ಬಿಡೋದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ ರಾಜ್ಯದಲ್ಲಿ ಆ ತರಹದ ವಾತಾವರಣವಿಲ್ಲ. ಇದನ್ನು ಜನರು ಕೂಡ ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದಲ್ಲಿಂದು ಮಠಾಧೀಶರು ರಾಜಕಾರಣಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ಮಠಾಧೀಶರು ರಾಜಕೀಯಕ್ಕೆ ಬರಲು ಇಲ್ಲಿನ ಪರಿಸ್ಥಿತಿ ಕೂಡ ಹೊಂದಾಣಿಕೆ ಆಗಬೇಕು.
ಮಠಾಧೀಶರು ಯಾರು ದೊಡ್ಡ ಸಂಖ್ಯೆಯಲ್ಲಿ ಬಂದಿಲ್ಲ. ದೇಶದಲ್ಲಿ ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತವರನ್ನು ಬಿಟ್ಟರೇ ಯಾರು ರಾಜಕೀಯಕ್ಕೆ ಬಂದಿಲ್ಲ ಎಂದರು.
ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯವಾಗಿರುತ್ತವೆ
ಇನ್ನು ರಾಜಕಾರಣಕ್ಕೆ ಬಂದ ಮೇಲೆ ರಾಜಕೀಯ ಪಕ್ಷಗಳನ್ನು ಟೀಕೆ ಮಾಡಬೇಕಾಗುತ್ತದೆ. ಸ್ವಾಮೀಜಿಗಳಿಗೆ ಸಮಸ್ಯೆ ಉದ್ಭವಿಸುತ್ತವೆ. ಅಲ್ಲದೇ ಯಾವುದೇ ಒಂದು ಜಾತಿಗೆ ಮಠಾದೀಶರು ಸೀಮಿತ ಆಗಲು ಆಗುವುದಿಲ್ಲ. ಮಠಾಧೀಶರು ಕಾವಿ ಬಟ್ಟೆ ಹಾಕಿಕೊಂಡ ಮೇಲೆ ಎಲ್ಲ ಜನರನ್ನು ಪ್ರೀತಿ ಮಾಡಬೇಕು, ಸಮಾನವಾಗಿ ಕಾಣಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಕಾರಣದಿಂದ ರಾಜಕೀಯಕ್ಕೆ ಸೂಕ್ತ ಆಗುವ ವ್ಯಕ್ತಿಗಳು ಬರಬೇಕು. ಆದರೆ ಎಲ್ಲರೂ ರಾಜಕೀಯಕ್ಕೆ ಬರುವುದಕ್ಕೆ ಸಾಧ್ಯ ಆಗುವುದಿಲ್ಲ ಎಂದು ಹೇಳಿದರು.
ಯಾವ ಮಠಾಧೀಶರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇದೆಯೋ, ಅವರು ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತಹವರ ರೀತಿಯಲ್ಲಿ ಧೈರ್ಯವಾಗಿ ರಾಜಕಾರಣದಲ್ಲಿ ನಿಲ್ಲುವ ಅಭಿಲಾಷೆಯಿಂದ ರಾಜಕಾರಣಕ್ಕೆ ಬರಲು ಪ್ರಯತ್ನ ಮಾಡಬಹುದು. ಅದು ರಾಜಕೀಯ ಪಕ್ಷಗಳ ಮೇಲೆ ಅವಲಂಬನೆ ಆಗಿರುತ್ತದೆ. ಆ ದೃಷ್ಟಿಯಿಂದ ಮಠಾಧೀಶರು ನಮ್ಮನ್ನು ಸಂಪರ್ಕ ಮಾಡಿಲ್ಲ. ಬರುವುದು ಬಿಡುವುದು ಅವರ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಎಂದರು.
ಈಗಾಗಲೇ ಮಠಾಧೀಶರು ರಾಜಕೀಯಕ್ಕೆ ಬರುವ ವಿಚಾರವಾಗಿ ಪರ, ವಿರೋಧವಾಗಿ ಬಹಳಷ್ಟು ಜನರು ಮಾತನಾಡಿದ್ದಾರೆ. ನಾನು ಅವರ ಪರ ಇಲ್ಲ, ಹಾಗೆಯೇ ವಿರೋಧವಾಗಿಲ್ಲ ಎಂದರು.